

ಯಳಂದೂರು: ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಚಿತ್ರನಟ ಡಾ.ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಸ್ಮರಣಾರ್ಥ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಮ್ಮರಗಾಲ ಗ್ರಾಮದ ಯುವಕರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥವಾಗಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯನ್ನು ಉಪ್ಪಿನಮೋಳೆ ಗ್ರಾಮದ ಸಾಲ್ಟ್ ಸಿಟಿ ಬಾಯ್ಸ ಬಳಗ ಆಯೋಜನೆ ಮಾಡಿತ್ತು.
ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಜನಪ್ರಿಯ ಕ್ರೀಡೆಗಳಲ್ಲಿ ಕಬಡ್ಡಿಯೂ ಒಂದಾಗಿದೆ. ಪ್ರೊ ಕಬಡ್ಡಿ ಬಂದ ಮೇಲೆ ಇದರ ಜನಪ್ರಿಯತೆ ವಿಶ್ವಾದ್ಯಂತ ಪಸರಿಸಿದೆ. ಇದನ್ನು ಮತ್ತೆ ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ವೇದಿಕೆ ಮಾಡಿಕೊಟ್ಟಿರುವ ಗ್ರಾಮದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಪ್ರತಿಭಾವಂತ ಯುವಕರು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸಿದರು.
ಒಟ್ಟು 30 ತಂಡಗಳು ಭಾಗವಹಿಸಿದ್ದವು. ಫೈನಲ್‌ನಲ್ಲಿ ಹೆಮ್ಮರಗಾಲ ಹಾಗೂ ಉಪ್ಪಿನಮೋಳೆ ತಂಡಗಳು ಸೆಣಸಿದವು. ಇದರಲ್ಲಿ ಹೆಮ್ಮರಗಾಲ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ಸ್ಮರಣಿಕೆ ಹಾಗೂ ನಗದು ಬಹುಮಾನವನ್ನು ವಿತರಣೆ ಮಾಡಲಾಯಿತು.
ಟಿಎಪಿಸಿಎಂಸಿ ಮಾಜಿ ಉಪಾಧ್ಯಕ್ಷ ಕುಸುಮರಾಜು, ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಇತರರು ಇದ್ದರು.