ಗಾಂಧಿಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಅನ್ಯಾಯ: ಹೆಮ್ಮನಹಳ್ಳಿ ಗ್ರಾಪಂ ಸದಸ್ಯ ಮಧುಸೂದನ್ ಗಂಭೀರ ಆರೋಪ

Hemmanahalli Gram Panchayat Members Press Conference Mandya
Published on

ಮಂಡ್ಯ: ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಗ್ರಾಮ ಪಂಚಾಯಿತಿಗೆ ಕೊಡಮಾಡುವ 2023-24ನೇ ಸಾಲಿನ ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಮದ್ದೂರು ತಾಲೂಕು ಹೆಮ್ಮನಹಳ್ಳಿ ಗ್ರಾಪಂಗೆ ಅನ್ಯಾಯವಾಗಿದೆ ಎಂದು ಗ್ರಾ.ಪಂ ಸದಸ್ಯರೂ ಆದ ವಕೀಲ ಮಧುಸೂದನ್ ಗಂಭೀರ ಆರೋಪ ಮಾಡಿದರು.

ಪುರಸ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 134 ಪ್ರಶ್ನಾವಳಿಗಳ ಮೂಲಕ ಗ್ರಾ.ಪಂಗೆ ಅಂಕಗಳನ್ನು ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು. ಈ ಅಂತಿಮ ಪಟ್ಟಿಯಲ್ಲಿ ಹೆಮ್ಮನಹಳ್ಳಿ, ಭಾರತೀನಗರ ಮತ್ತು ಕದಲೂರು ಗ್ರಾ.ಪಂ ಹೆಸರಿತ್ತು. ಆದರೆ ನಮಗಿಂತ ಕಡಿಮೆ ಅಂಕ ಪಡೆದ ಭಾರತೀನಗರ ಗ್ರಾ.ಪಂ ಆಯ್ಕೆ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಆಯ್ಕೆಯ ವಿರುದ್ಧ ಜಿ.ಪಂ ಸಿಇಒ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಹಾಗೂ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಸಂಬಂಧ ಜಿ.ಪಂ ಸಿಇಒ ಅವರು ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಜತೆ ನ.3ರಂದು ಜಿ.ಪಂ ನಲ್ಲಿ ಸಭೆ ನಡೆಸಿ ಹೆಮ್ಮನಹಳ್ಳಿ, ಭಾರತೀನಗರ ಗ್ರಾ.ಪಂಗಳ ಅಂಕಗಳನ್ನು ಪರಿಶೀಲನೆ ನಡೆಸಲಾಗಿದೆ. ಅದರಂತೆ ಹೆಮ್ಮನಹಳ್ಳಿ ಗ್ರಾ.ಪಂಗೆ 21 ಹೆಚ್ಚು ಅಂಕಗಳು ಲಭಿಸಿರುವುದು ದೃಢಪಟ್ಟಿದೆ ಎಂದರು.

ಭಾರತೀನಗರ ಗ್ರಾ.ಪಂಗೆ ಅಂಕ ದೊರೆಯದ ಹಲವು ಭಾಗಗಳಿಗೆ 2 ದಿನಗಳಲ್ಲಿ ಕೃತಕ ದಾಖಲಾತಿ ಸೃಷ್ಠಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇದು ಮೇಲಧಿಕಾರಿಗಳ ಮಟ್ಟದಲ್ಲಿ ನಡೆದಿರುವ ವಂಚನೆಯು ಅಕ್ರಮವಾಗಿದೆ. ಈ ಸಂಬಂಧ ಅಧಿಕಾರಿಗಳು ನ್ಯಾಯ ದೊರಕಿಸಿಕೊಡದೇ ಹೋದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಎಚ್ಚರಿಕೆ ನೀಡಿದರು.

ಹೆಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ, ಸದಸ್ಯರಾದ ಕಮಲಾಕ್ಷಿ, ಎಚ್.ಸಿ.ಉಮೇಶ್, ನಾಗೇಶ್, ಎಚ್.ಕೆ.ನಂದೀಶ್‌ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net