

ಮಂಜುನಾಥ ಅರಸ್ ಚಿಕ್ಕನಾಯಕನಹಳ್ಳಿ
ರೈತರ ಸತತ ಹೋರಾಟದ ಲವಾಗಿ ತಾಲೂಕಿಗೆ ಹರಿಯುತ್ತಿರುವ ಹೇಮಾವತಿ ನೀರು ನಾಲೆಯಲ್ಲಿ ಸರಾಗವಾಗಿ ಹರಿಯಲಾಗದೆ, ಕೆರೆಗಳಿಗೆ ನೀರಿನ ಸೌಭಾಗ್ಯವಿಲ್ಲದಂತಾಗಿದೆ.
ಕಳೆದ ಎರಡು ತಿಂಗಳಿನಿಂದಲೂ ನಾಲೆಗೆ ನೀರು ಹರಿಬಿಡಲಾಗಿದೆಯಾದರೂ ನೀರು ಶೆಟ್ಟಿಕೆರೆ ಕೆರೆ ದಾಟಲು ಇದುವರೆಗೂ ಸಾಧ್ಯವಾಗಿಲ್ಲ. -ಗೊರೊರು ಡ್ಯಾಂನಿಂದ ತುಮಕೂರು ಜಿಲ್ಲೆಗೆ ಚಾನಲ್ ಮೂಲಕ ಹರಿಯುತ್ತಿರುವ ಹೇಮಾವತಿಯಿಂದ ಹಂಚಿಕೆಯಾಗಿರುವ ನೀರು ಸರಿಯಾದ ಪ್ರಮಾಣದಲ್ಲಿ ಹರಿಯದೇ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂಬುದು ರೈತರ ಆರೋಪ.ಹೇಮಾವತಿ ನೀರಾವರಿ ಯೋಜನೆಯಲ್ಲಿ ಜಿಲ್ಲೆಯ ಪಾಲಿಗೆ 24.88 ಟಿಎಂಸಿ ನೀರು ಹಂಚಿಕೆಯಾಗಿದೆ, ಈ ಪೈಕಿ ತುಮಕೂರು ಶಾಖಾ ನಾಲೆಯಿಂದ 0.80 ಟಿಎಂಸಿ ನೀರು ಚಿಕ್ಕನಾಯಕನಹಳ್ಳಿಯ ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಪಡೆಯಲು ಅವಕಾಶವಿದೆಯಾದರೂ ಜಲಾಶಯ ತುಂಬಿದ್ದರೂ ಕಳೆದೆರಡು ತಿಂಗಳಿನಿಂದ ತಾಲೂಕಿನ ಪಾಲಿಗೆ ಸಿಕ್ಕಿರುವುದು 84.70ಕ್ಯೂಸೆಕ್ ನೀರು ಮಾತ್ರ.
ಬೋರನಕಣಿವೆ ತಲುಪುವುದು ಅಸಾಧ್ಯ!: ತಿಪಟೂರು ತಾಲೂಕು ಬೆಳಗೆರೆ ಸಮೀಪದಿಂದ ಸಾಸಲು ಕೆರೆ ಮೂಲಕ ಆರಂಭವಾಗುವ ಹೇಮಾವತಿ ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ತಿಂಗಳಿನಿಂದ ನಿಧಾನವಾಗಿ ಹರಿಯುತ್ತಿರುವ ಕಾರಣಕ್ಕೆ ಶೆಟ್ಟಿಕೆರೆ ಕೆರೆ ಮಾತ್ರ ತುಂಬಲು ಸಾಧ್ಯವಾಗಿದೆ. ಇನ್ನು ಅಂಕಸಂದ್ರ ಅಣೆ ದಾಟಿಕೊಂಡು ಜೋಡಿ ತಿಮ್ಲಾಪುರ, ಹುಳಿಯಾರು ಮೂಲಕ ಬೋರನಕಣಿವೆ ತಲುಪುವುದು ಅಸಾಧ್ಯ ಎನ್ನಿಸಿದ್ದು, ಬರದಿಂದ ತತ್ತರಿಸುತ್ತಿರುವ ಜನರು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಬಗ್ಗೆ ಪ್ರಶ್ನಿಸಲಾರಂಭಿಸಿದ್ದಾರೆ. ಅಜ್ಜನಕೆರೆ, ಪಟ್ಟದೇವರಕೆರೆ, ಹಸೂರು(ಕುಪ್ಪೂರು ಚಿಕ್ಕಕೆರೆ), ಮಂಚಸಂದ್ರ, ಹಾಲ್ಕುರಿಕೆ, ತಮ್ಮಡಿಹಳ್ಳಿ, ದಾಸಿಹಳ್ಳಿ, ಕುಪು$್ಪರು ಕೆರೆಗಳಿಗೆ ನೀರು ಹರಿಸುವ ನಾಲೆ ಕಾಮಗಾರಿಯೂ ಕುಂಟುತ್ತಲೇ ಸಾಗಿದ್ದು, ಈ ಭಾಗಕ್ಕೂ ನೀರು ಹರಿಯಲು ಸಾಧ್ಯವಿಲ್ಲ. ತಾಲೂಕಿನ ಪಾಲಿನ ನೀರನ್ನು ಪಡೆಯಲು ಸ್ಥಳಿಯ ಶಾಸಕರು, ಸಂಸದರು ಅಧಿಕಾರಿಗಳ ಕಿವಿಹಿಂಡಿ ನಾಲೆ ಶುಚಿಗೊಳಿಸುವ ಕೆಲಸ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
56.70 ಕ್ಯೂಸೆಕ್ ನೀರು ಬಾಕಿ: ಪೂರ್ಣ ಪ್ರಮಾಣ ದಲ್ಲಿ ನಾಲೆಯಲ್ಲಿ ಹೇಮಾವತಿ ನೀರು ಹರಿ ಯುವುದು ಕಷ್ಟವಾಗಿದ್ದು, ಹೇಮಾವತಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೂ ಜನ ಕೆಂಡಾಮಂಡಲರಾಗಿದ್ದಾರೆ. ನೀರು ಹರಿಯುವ ಮುನ್ಸೂಚನೆಯಲ್ಲಿಯೇ ನಾಲೆಯಲ್ಲಿ ಕಳೆ ತೆಗೆದು ನೀರು ಸರಾಗವಾಗಿ ಹರಿಯಲು ಏಕೆ ಕ್ರಮಕೈಗೊಂಡಿಲ್ಲ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ತಾಲೂಕಿನ ಪಾಲಿಗೆ ಇನ್ನೂ 56.70 ಕ್ಯೂಸೆಕ್ ನೀರು ಹರಿಯಬೇಕಿದ್ದು, ಏತನೀರಾವರಿ ಮೂಲಕ ಹಿಂದೆಲ್ಲ ತುಂಬಿದ್ದ ಜೆ.ಸಿ.ಪುರ, ನಡುವನಹಳ್ಳಿ, ಬ್ಯಾಡರಹಳ್ಳಿ ಕೆರೆಗಳಿಗೂ ಈ ವರ್ಷ ನೀರು ಸರಿಯಾಗಿ ಹರಿಯುತ್ತಿಲ್ಲ ಎಂಬ ಬೇಸರ ರೈತರಲ್ಲಿದೆ.
ಕಳೆದ ಎರಡು ತಿಂಗಳಿನಿಂದಲೂ ತಾಲೂಕಿನ ನಾಲೆಗೆ ನೀರು ಬಿಟ್ಟರೂ ಸಾಸಲು, ಶೆಟ್ಟಿಕೆರೆ ಕೆರೆಯೇ ತುಂಬಲು ಸಾಧ್ಯವಾಗಿಲ್ಲ. ನಾಲೆಯಲ್ಲಿ ಪೂರ್ಣಪ್ರಮಾಣದ ನೀರು ಹರಿಯುತ್ತಿಲ್ಲವಾದರೂ ಸಂಬಂಧಪಟ್ಟವರು ತಲೆಕೆಡಿಸಿಕೊಂಡಿಲ್ಲ. ಅಂಕಸಂದ್ರ ಅಣೆ ದಾಟಿಕೊಂಡು ತಿಮ್ಮಲಾಪುರ ಕೆರೆ ತುಂಬಿ ಬೋರನಕಣಿವೆಗೆ ಹೇಮಾವತಿ ಹರಿಯುವುದು ಕನಸು ಎನ್ನಿಸುತ್ತಿದೆ.
ಎ.ಪಿ.ಶರತ್ ರೈತ, ಅರಳೀಕೆರೆ
ಈಗಾಗಲೇ ನಾಲೆ ಕಾಮಗಾರಿ ಸಂಪೂರ್ಣ ವಾಗಿರುವಂತಹ ಚಾನಲ್ನಲ್ಲಿ ಮುಖ್ಯ ಚಾನಲ್ನಲ್ಲಿ ಹರಿಯುವ ನೀರಿನ ಪ್ರಮಾಣಕ್ಕೆ ತಕ್ಕಂತೆ ಹರಿಸಲಾಗುತ್ತಿದೆ. ಚಾನಲ್ ಕಾಂಕ್ರೀಟ್ ಆಗದ ಕಾರಣಕ್ಕೆ ಅಲ್ಲಲ್ಲಿ ಮಣ್ಣು ಕುಸಿತವಾಗಿದ್ದು, ಅದರೂ ಈ ಭಾಗದ ಗೇಟ್ವಾಲ್ನಲ್ಲಿ ಸಂಪೂರ್ಣವಾಗಿ ನೀರು ಹರಿಸಲು ಕ್ರಮವಹಿಸಲಾಗುವುದು.
ಎಲ್.ಸೌಜನ್ ಎಇ, ಹೇಮಾವತಿ ನಾಲಾ ವಲಯ
ಶೆಟ್ಟಿಕೆರೆ ಭಾಗಕ್ಕೆ ಹರಿಯುತ್ತಿರುವ ಹೇಮಾವತಿ ನೀರಿನ ಚಾನಲ್ನಲ್ಲಿ ಮಣ್ಣು ಕುಸಿತವಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಭವಿಷ್ಯದಲ್ಲಿ ನಾಲೆಗೆ ಕಾಂಕ್ರೀಟ್ ಒಳಚಾನಲ್ ಮೂಲಕ ನೀರು ಹರಿಸಲು ಯೋಜನೆ ರೂಪಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪಾಲಿನ ನೀರನ್ನು ಬಳಸಿಕೊಳ್ಳಲು ಕ್ರಮವಹಿಸಲಾಗುವದು.
ಸಿ.ಬಿ.ಸುರೇಶ್ಬಾಬು ಶಾಸಕ