ದಾಬಸ್‌ಪೇಟೆಗೆ ಹೇಮೆ ನೀರು ; ಯೋಜನೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ

DSC_4653
Published on

ತುಮಕೂರು: ಹಿರೇಹಳ್ಳಿ ಹಾಗೂ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಿಗೆ ಹೇಮೆ ನೀರು ಹರಿಸುವ ಕಾಮಗಾರಿಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆ ಹಾಗೂ ಮೈದಾಳ ಕೆರೆ ಮೂಲಕ 15 ಎಂಎಲ್‌ಡಿ ನೀರು ಸರಬರಾಜು ಯೋಜನೆಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮೊದಲನೇ ಹಂತದಲ್ಲಿ ಹೊನ್ನೇನಹಳ್ಳಿ ಕೆರೆ ಅಭಿವೃದ್ಧಿ, ಪಂಪ್‌ಹೌಸ್, ಜಾಕ್‌ವೆಲ್, ಲಭ್ಯವಿರುವ ಪೈಪ್‌ಗಳ ಅಳವಡಿಕೆ ಹಾಗೂ ಇತರ ಕಾಮಗಾರಿಗಳನ್ನು ಒಳಗೊಂಡಂತೆ ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 5 ಎಂಎಲ್‌ಡಿ ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದರು. 27.50 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಅಲ್ಲಿಂದ ಮೈದಾಳ ಕೆರೆಗೆ ನೀರು ಹರಿಸುವ ಈ ಕಾಮಗಾರಿಯಿಂದಾಗಿ ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರಕಲಿದೆ. ಸಿದ್ಧಗಂಗಾ ಮಠಕ್ಕೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಮಸಾಲೆಜಯರಾಂ, ಡಾ.ಎಚ್. ಡಿ.ರಂಗನಾಥ್, ಎಂ.ವಿ.ವೀರಭದ್ರಯ್ಯ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್ ಉಪಸ್ಥಿತರಿದ್ದರು. ಶ್ರೀಮಠಕ್ಕೆ ಭೇಟಿ: ಸಚಿವ ಜಗದೀಶ್ ಶೆಟ್ಟರ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿ ಪ್ರಾರ್ಥಿಸಿದರು. ನಂತರ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.

ನಾಯಕತ್ವ ಬದಲಾವಣೆ ಊಹಾಪೋಹ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಯಾರೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಸುಮ್ಮನೆ ಊಹಾಪೋಹ ಹರಿದಾಡುತ್ತಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಭಿನ್ನಮತ ವಿಚಾರವು ಪಕ್ಷದೊಳಗಿನ ಆಂತರಿಕ ಸಮಸ್ಯೆ. ನಾವೆಲ್ಲ ಸಿಎಂ ಜತೆಗೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಈ ಕುರಿತು ಬಹಿರಂಗವಾಗಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ಯಾರಿಗೆ ಏನಾದರೂ ಅಸಮಾಧಾನ ಇದ್ದರೆ ನೇರವಾಗಿ ಸಿಎಂ ಜತೆಗೆ ಮಾತನಾಡೋಣ. ಪಕ್ಷದ ಅಧ್ಯಕ್ಷರ ಜತೆ ಮಾತಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದರು. ಈ ರಾಜಕೀಯ ಬೆಳವಣಿಗೆಯಿಂದ ಆಡಳಿತ ಯಂತ್ರಕ್ಕಾಗಲಿ, ನಿತ್ಯದ ಆಡಳಿತಕ್ಕಾಗಲೀ ಏನೂ ತೊಂದರೆಯಾಗಿಲ್ಲ. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಡಿಕೆಶಿ ನೇತೃತ್ವದಲ್ಲಿ ‘ಪಾದಯಾತ್ರೆ’: ಕುಣಿಗಲ್ ತಾಲೂಕಿಗೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಗ್ ಕೆನಾಲ್ ರದ್ದುಪಡಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಪಾದಯಾತ್ರೆ’ ನಡೆಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಡಾ.ಎಚ್. ಡಿ.ರಂಗನಾಥ್ ಹೇಳಿದರು. ಜಿಪಂ ಸಭಾಂಗಣದಲ್ಲಿ ಶನಿವಾರ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು 610 ಕೋಟಿ ರೂ., ಅನುದಾನದಲ್ಲಿ ಕುಣಿಗಲ್‌ಗೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಘೋಷಿಸಿದ್ದು, ಈ ಯೋಜನೆಯನ್ನು ರದ್ದುಪಡಿಸಿರುವುದಾಗಿ ಪ್ರತಿ ಸಭೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳುತ್ತಿದ್ದು, ಇದರಿಂದ ಕುಣಿಗಲ್‌ಗೆ ಅನ್ಯಾಯವಾಗಿದೆ. ಮಾರ್ಕೋನಹಳ್ಳಿ ಜಲಾಶಯಕ್ಕೆ 1 ಟಿಎಂಸಿ ನೀರು ಬಿಡಬೇಕೆಂಬುದು ಬೇಡಿಕೆಯಾಗಿದೆ. ಹಾಗಾಗಿ, ಮುಖ್ಯಮಂತ್ರಿ ಗಮನಸೆಳೆಯಲು ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net