

ಮಾಗಡಿ : ತಾಲೂಕಿನ ಬಗಿನಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೇಮಾವತಿ ಸಿ.ಎನ್. ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಗಂಗುಡ್ಡಯ್ಯ ನಿಧನದಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಹೇಮಾವತಿ ಸಿ.ಎನ್.ರಾಜಣ್ಣ ಹೊರತು ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ತಿಳಿಸಿದರು.
ಅಧ್ಯಕ್ಷೆ ಹೇಮಾವತಿ ಸಿ.ಎನ್.ರಾಜಣ್ಣ ಮಾತನಾಡಿ, ತಾಲೂಕಿನಲ್ಲೇ ಪ್ರಥಮ ಬಾರಿಗೆ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಿರುವುದು ಮಹಿಳೆಯರಿಗೆ ಕೊಟ್ಟ ಗೌರವ. ಪ್ರಾಮಾಣಿಕವಾಗಿ ರೈತರಿಗೆ ಸಿಗಬೇಕಾದ ಸೌಲತ್ತುಗಳನ್ನು ಕಾಲಕಾಲಕ್ಕೆ ಒದಗಿಸಲಾಗುವುದು. ರಸಗೊಬ್ಬರ, ಪಡಿತರ ವಿತರಣೆಗೆ ಹೆಚ್ಚಿನ ಕಾಳಜಿ ತೋರಲಾಗುವುದು. ರೈತರಿಗೆ ಬೆಳೆ ಸಾಲ, ಚಿನ್ನಾಭರಣ ಸಾಲ, ಕೈಸಾಲ ಒದಗಿಸುವ ಮೂಲಕ ಕೃಷಿಕರ ಸ್ವಾವಲಂಬನೆಗೆ ಆದ್ಯತೆ ನೀಡಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ಜಿಲ್ಲಾ ಪ್ರತಿನಿಧಿ ಎಂ.ಕೆ.ಧನಂಜಯ ಮಾತನಾಡಿ. ಸಂಘ ಉತ್ತಮವಾಗಿ ನಡೆಯುತ್ತಿದೆ. ಹೊಸ ಕಟ್ಟಡ ಸಹ ನಿರ್ಮಾಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆ ಗೊಳಿಸಲಾಗುವುದು. ನೂತನ ಅಧ್ಯಕ್ಷರು ಸಂಘವನ್ನು ಮತಷ್ಟು ಅಭಿವೃದ್ಧಿಪಡಿಸಲಿ ಎಂದರು.
ತಾಪಂ ಮಾಜಿ ಅಧ್ಯಕ್ಷ ಶಿವರಾಜು ಮಾತನಾಡಿ, ಬಿಡಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಅವರು ತಾಲೂಕಿನ ಸಹಕಾರಿ ಸಂಘಗಳ ಪ್ರಗತಿಗೆ ಒತ್ತು ನೀಡಿದ್ದು, ರೈತರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕಂಕಣಬದ್ಧರಾಗಿದ್ದಾರೆ. ಅವರಿಗೆ ನಾವೆಲ್ಲರೂ ಕೈಜೋಡಿಸೋಣ ಎಂದರು.
ಅವಿರೋಧ ಆಯ್ಕೆ ಬಳಿಕ ಹೇಮಾವತಿ ಅವರ ಬೆಂಬಲಿಗರು, ನಿರ್ದೆಶಕರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಂಘದ ಉಪಾಧ್ಯಕ್ಷ ಕೆಂಪಣ್ಣ, ನಿರ್ದೇಶಕರಾದ ಕೆಂಪೇಗೌಡ, ತಿಮ್ಮಪ್ಪ, ಹನುಮಂತಯ್ಯ, ಬೆಟ್ಟೇಗೌಡ, ಕಲ್ಲು ಬಸವಯ್ಯ, ಗೌರಮ್ಮ, ರಾಮಚಂದ್ರು, ಸಿ.ಕೆ.ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ರವಿಕುಮಾರು, ತಾಪಂ ಮಾಜಿ ಸದಸ್ಯ ಟಿ.ಜಿ.ವೆಂಕಟೇಶ್, ಬಗಿನಗೆರೆ ರಂಗಸ್ವಾಮಯ್ಯ, ಕಾರ್ಯದರ್ಶಿ ಗಂಗಾಧರ್ ಇದ್ದರು.