ತುಮಕೂರು ಜಿಲ್ಲೆಗೆ ಹರಿಯುತ್ತಿದ್ದ ಹೇಮಾವತಿ ನೀರು ಸ್ಥಗಿತ

11 TPT HEME
Published on

ತಿಪಟೂರು: ತುಮಕೂರು ಜಿಲ್ಲೆಗೆ 2ನೇ ಬಾರಿ ಬಿಡಲಾದ ಹೇಮಾವತಿ ನೀರು ಎನ್‌ಬಿಸಿ (ನಾಗಮಂಗಲ ಬ್ರಾಂಚ್ ಕೆನಾಲ್) ಮತ್ತು ಟಿವಿಸಿ (ತುಮಕೂರು ಬ್ರಾಂಚ್ ಕೆನಾಲ್) ನಾಲೆಯಲ್ಲಿ ಹರಿದಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕಾವೇರಿ ಟ್ರಿಬ್ಯೂನಲ್ ಎಚ್ಚರಿಕೆ ನೀಡಿದ್ದರಿಂದ ಹೇಮಾವತಿ ನೀರನ್ನು ಜೂ.11ರಂದು ನಿಲ್ಲಿಸಲಾಗಿದೆ ಎನ್ನಲಾಗಿದೆ.

ಕಳೆದ ವರ್ಷ ಜಿಲ್ಲೆಯ ಪಾಲಿಗೆ ಮಂಜೂರಾಗಿದ್ದ 25.3 ಟಿಎಂಸಿ ನೀರಿನ ಪೈಕಿ ಉಳಿದಿದ್ದ 7-8 ಟಿಎಂಸಿ ನೀರು ಪಡೆಯಲು ಹಲವು ಹೋರಾಟ, ಒತ್ತಾಯದ ನಂತರ ಮೇ 22ರಿಂದ 1750 ಕ್ಯೂಸೆಕ್ ನೀರು ಬಿಡಲಾಗಿತ್ತು. ಈ ಪೈಕಿ ಎನ್‌ಬಿಸಿ ನಾಲೆಯಲ್ಲಿ ನಾಗಮಂಗಲ ವಿಭಾಗಕ್ಕೆ 600 ಕ್ಯೂಸೆಕ್ ನೀರು ಹರಿದರೆ, ಉಳಿದ 1,150 ಕ್ಯೂಸೆಕ್ ನೀರು ಟಿವಿಸಿ ನಾಲೆ ಮೂಲಕ 20 ದಿನಕ್ಕೆ ಪ್ರತಿ ದಿನ ಅಂದಾಜು 1100 ಕ್ಯೂಸೆಕ್‌ನಂತೆ 22 ಸಾವಿರ ಕ್ಯೂಸೆಕ್ ನೀರು ಜಿಲ್ಲೆಗೆ ಹರಿದಿದೆ ಎನ್ನಲಾಗಿದೆ.

ಜಿಲ್ಲೆಗೆ 2ನೇ ಬಾರಿಗೆ ಮೇ 31ರವರೆಗೂ ಪಡೆಯುವ ನೀರು ಕಳೆದ ವರ್ಷದ ಲೆಕ್ಕಕ್ಕೆ ಸೇರುತ್ತದೆ. ಮೇ ಮುಕ್ತಾಯವಾಗಿ ಜೂನ್‌ನಲ್ಲಿ ಹರಿಯುವ ನೀರು ಪ್ರಸಕ್ತ ವರ್ಷದ ಹೊಸ ಲೆಕ್ಕಕ್ಕೆ ಸೇರಿಸಲಾಗುವುದು ಎಂಬ ಷರತ್ತು ಹಾಕಿ ನೀರು ಬಿಡಲಾಗಿತ್ತು. ಈ ವಿವಾದಿತ ಆದೇಶಕ್ಕೆ ಒಪ್ಪಿಕೊಂಡರೂ ಇದೀಗ ಜಿಲ್ಲೆಗೆ ಹರಿಸಲಾಗುತ್ತಿದ್ದ ನೀರು ನಿಲ್ಲಿಸಲಾಗಿದೆ. ಜಿಲ್ಲೆಗೆ ಹರಿದಿರುವ ನೀರಿನ ಪ್ರಮಾಣವೆಷ್ಟು ಎಂದು ಕೇಳಿದರೆ, ಕೆಲವೆಡೆ ನಾಲೆಯ ಉದ್ದಕ್ಕೂ ಡಿ.ಡಬ್ಲು.ಎಸ್. (ಕುಡಿಯುವ ನೀರಿನ ಯೋಜನೆ)ಯಡಿ ಕೆರೆಗಳಿಗೆ ನೀರು ಹರಿಸಿಕೊಳ್ಳಲಾಗಿರುವ ಕಾರಣ ಗೇಜ್ ಅಳತೆಯಲ್ಲಿ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಗೊರೂರು ಜಲಾಶಯದಲ್ಲಿ ನೀರು ಸಂಗ್ರಹ ಖಾಲಿ ಆಗಿದೆಯೇ? ಅಥವಾ 8 ಟಿಎಂಸಿಯಷ್ಟು ಕನಿಷ್ಠ ನೀರಿನ ಪ್ರಮಾಣ (ಡೆಡ್ ಸ್ಟೋರೇಜ್) ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೀರು ನಿಲ್ಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಶಾಸಕ ಬಿ.ಸಿ.ನಾಗೇಶ್, ಕಾವೇರಿ ಟ್ರಿಬ್ಯೂನಲ್‌ನ ಎಚ್ಚರಿಕೆ ನಂತರ ಜೂ.11ರಿಂದ ನೀರು ನಿಲ್ಲಿಸಲಾಗಿದೆ ಎಂದಷ್ಟೇ ಹೇಳಿ, ಮಿಕ್ಕ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಖಚಿತಪಡಿಸಿಕೊಳ್ಳಿ ಎಂದಿದ್ದಾರೆ. ಎನ್‌ಬಿಸಿ ನಾಲೆಗೆ ನೀರು ಹರಿಸಿದ್ದೇ ತಪ್ಪು ಎನ್ನಲಾಗಿದ್ದು, ಈ ಕಾರಣಕ್ಕೆ ಟಿವಿಸಿ ನಾಲೆಯ ನೀರನ್ನೂ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಹೇಮಾವತಿ ನೀರು ನಿಲ್ಲಿಸಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸೋಮವಾರ ವಿಚಾರಿಸಿ ತಿಳಿಸಲಾಗುವುದು. ಜೆ.ಸಿ.ಮಾಧುಸ್ವಾಮಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net