ಸೆಪ್ಟೆಂಬರ್‌ನಲ್ಲಿ ಚಿಕ್ಕನಾಯಕನಹಳ್ಳಿಗೆ ಹೇಮಾವತಿ ನೀರು

Hemavathi2
Published on

ತುಮಕೂರು: ಒಂದು ಕಾಲದಲ್ಲಿ ಅರೆಮಲೆನಾಡು ಎಂದು ಕರೆಸಿಕೊಂಡ ಚಿಕ್ಕನಾಯಕನಹಳ್ಳಿ ಇಂದು ಬರದ ಸೀಮೆಯಾಗಿದೆ. 26 ಕೆರೆಗಳಿಗೆ ಹೇಮಾವತಿ ನೀರು ಹರಿಸುವ 2007ರ ಯೋಜನೆಗೆ 2020ರಲ್ಲಿ ಮೋಕ್ಷ ಸಿಕ್ಕಿದ್ದು ವಿಜಯದಶಮಿಗೂ ಮುಂಚೆ ಸಾಸಲು ಕೆರೆಗೆ ನೀರು ಹರಿಯಲಿದೆ.

ಸಾಸಲು ಕೆರೆಯಿಂದ ಗುರುತ್ವಾಕರ್ಷಣೆಯ ಮೂಲಕವೇ ಹುಳಿಯಾರುವರೆಗೆ ಸಿಗುವ ಕೆರೆಗಳಿಗೆ ಹೇಮೆ ಹರಿಯಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸೆಪ್ಟೆಂಬರ್ ಎರಡನೇ ವಾರದಲ್ಲಿಯೇ ಈ ಭಾಗದ ಜನರ ಯೋಜನೆಯ ಒಂದು ಹಂತ ಸಾಕಾರವಾಗಲಿದೆ ವಿವಿಧ ಸಂಘ-ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ 2007ರಲ್ಲಿ ಸರ್ಕಾರದ ಅನುಮೋದನೆ ಪಡೆದಿದ್ದ ಹೇಮಾವತಿ ನಾಲೆ ಕಾಮಗಾರಿಗೆ 2012ರಲ್ಲಿ ಅಂದಿನ ಸಿಎಂ ಜಗದೀಶ್‌ಶೆಟ್ಟರ್ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಭೂ ವಿವಾದ ಬಗೆಹರಿಸದೆ ಯೋಜನೆ ಮರೀಚಿಕೆಯಾಗಿತ್ತು.

2019ರಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಅಧಿಕಾರ ಬಳಸಿಕೊಂಡು ಕಾಮಗಾರಿಗೆ ಶರವೇಗ ನೀಡಿದ್ದು ಜನರು ಬಹುದಿನದ ಕನಸು ಸಾಕಾರವಾಗುವ ಸಮಯ ಬಂದಿದೆ. ಸಚಿವ ಮಾಧುಸ್ವಾಮಿ ಸ್ವಯಂ ರೈತರ ಮನವೊಲಿಸಿ, ಅಗತ್ಯ ಅನುದಾನ ನೀಡುವ ಜತೆಗೆ ನಾಲೆಯ ಕಾಮಗಾರಿಯ ಉಸ್ತುವಾರಿ ವಹಿಸಿದ್ದು ವರ್ಷದೊಳಗೆ ನಾಲೆ ಸಿದ್ಧವಾಗುವಂತಾಗಿದೆ. 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ 102ಕೋಟಿ ರೂ. ಹಾಗೂ ಏತ ನೀರಾವರಿ ಮೂಲಕ 5 ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ತಾಲೂಕಿನ ಈಗಾಗಲೇ ಭದ್ರ ಹಾಗೂ ಎತ್ತಿನಹೊಳೆ ಯೋಜನೆಗಳ ಕೆಲಸವೂ ನಡೆಯುತ್ತಿದೆ.

ಒಟ್ಟು 38.05ಕಿಮೀ ನಾಲೆ: ಗುರುತ್ವಾಕರ್ಷಣಾ ಭಾಗದಲ್ಲಿ ಒಟ್ಟು 38.05ಕಿಮೀ ಉದ್ದದ ನಾಲೆ ಇದೆ. ಮುಖ್ಯ ಫೀಡರ್ ನಾಲೆ 6.85ಕಿಮೀ ಇದ್ದು ಬಹುತೇಕ ಪೂರ್ಣಗೊಂಡಿದೆ. ಚಿಕ್ಕನಾಯಕನಹಳ್ಳಿ ಶಾಖಾ ನಾಲೆ 11.50ಕಿಮೀ ಇದ್ದು ಈಗಾಗಲೇ 2.50ಕಿಮೀ ಕಾಮಗಾರಿ ಮುಗಿದಿದೆ. ಹಾಲ್ಕುರಿಕೆ ಶಾಖಾ ನಾಲೆ 19.70 ಕಿಮೀ ಇದ್ದು 4.50ಕಿಮೀ ಕಾಮಗಾರಿ ಪೂರ್ಣವಾಗಿದ್ದು 1.50ಕಿಮೀ ಪ್ರಗತಿಯಲ್ಲಿದೆ.

ಈ ಕೆರೆಗಳಿಗೆ ನೀರು: ಸಾಸಲು, ಶೆಟ್ಟಿಕೆರೆ, ದಾಸೀಹಳ್ಳಿ, ಕೊಡ್ಲಾಗರ, ಚುಂಗನಹಳ್ಳಿ, ಮಾರಸಂದ್ರ, ನವಿಲೆ, ಮೇಲನಹಳ್ಳಿ, ಅಣೇಕಟ್ಟೆ, ದಬ್ಬೇಘಟ್ಟ, ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಮಂಚಸಂದ್ರ, ಅಜ್ಜನಕೆರೆ, ಪಟ್ಟದೇವರಕೆರೆ, ಹಾಲ್ಕುರಿಕೆ, ಕುಪ್ಪೂರು ದೊಡ್ಡಕೆರೆ, ಕುಪ್ಪೂರು ಚಿಕ್ಕಕೆರೆ, ತಮ್ಮಡಿಹಳ್ಳಿ, ಜೋಡಿ ತಿಮ್ಮಲಾಪುರ ಕೆರೆ ಹಾಗೂ ಹುಳಿಯಾರು ದೊಡ್ಡಕೆರೆ ಹಾಗೂ ಏತ ನೀರಾವರಿ ಮೂಲಕ ನಡುವನಹಳ್ಳಿ, ಜೆ.ಸಿ.ಪುರ, ಮಲಗೊಂಡನಹಳ್ಳಿ (ನಾಗೇನಹಳ್ಳಿ) ಹಾಗೂ ಬ್ಯಾಡರಹಳ್ಳಿ ಕೆರೆಗೆ ಹೇಮೆ ಹರಿಯಲಿದ್ದಾರೆ. ಗುರುತ್ವಾಕರ್ಷಣೆ ಮೂಲಕ 478.833 ಎಂಸಿಎಫ್‌ಟಿ ನೀರು 147 ಗ್ರಾಮಗಳಿಗೆ ನೆರವಾಗುವ 21 ಕೆರೆಗಳಿಗೆ ಮತ್ತು ಲಿಫ್ಟ್ ಮೂಲಕ 34.453ಎಂಸಿಎಫ್‌ಟಿ ನೀರು 17 ಗ್ರಾಮಗಳಿಗೆ ನೆರವಾಗುವ 4 ಕೆರೆಗಳಿಗೆ ಹರಿಯಲಿದೆ.

ಹುಳಿಯಾರು ಸೇರಿದ ಹೇಮೆ: ಬಿಳಿಗೆರೆಯಿಂದ ಸಾಸಲು ಕೆರೆಯವರೆಗಿನ 8 ಕಿಮೀ ನಾಲೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಬಿಳಿಗೆರೆ ಸರೆಹದ್ದಿನಲ್ಲಿ ಅಳವಡಿಸಿರುವ 0.8ಕಿಮೀ ಬಾಕ್ಸ್ ಕಲ್ವಾರ್ಟ್‌ನಲ್ಲಿ 8ಮೀ.ನಷ್ಟು ಹೂಳು ತುಂಬಿಕೊಂಡಿದ್ದು ಅದನ್ನು ತೆಗೆಯುವುದು ಸವಾಲಾಗಿದೆ, ಮಾನವ ಸಂಪನ್ಮೂಲ ಬಳಸಿಕೊಂಡು ಮಣ್ಣು ತೆಗೆಯುವ ಕಾರ್ಯ ಸಾಗಿದ್ದು ಸಾಸಲು ಕೆರೆವರೆಗಿನ ನಾಲೆಯ ಶುದ್ಧೀಕರಣ ಕೂಡ ನಡೆಯುತ್ತಿದೆ. ಇದಾದರೆ ಸಾಸಲು, ಶೆಟ್ಟಿಕೆರೆ, ತಿಮ್ಲಾಪುರ-ಜೋಡಿಕೆರೆ, ಹುಳಿಯಾರು ಕರೆಗಳಿಗೆ ಮೊದಲ ಹಂತದಲ್ಲಿ ನೀರು ಹರಿಯಲಿದೆ. ಗುರುತ್ವಾಕರ್ಷಣೆಯ ಮೂಲಕ ನೀರು ಹರಿಯುವುದರಿಂದ ಸ್ವಾಭಾವಿಕವಾಗಿ ಸುತ್ತಮುತ್ತಲಿನ ಅಂತರ್ಜಲಮಟ್ಟ ಹೆಚ್ಚಾಗಲಿದ್ದು ರೈತರ ಬದುಕು ಉಳಿಯಲಿದೆ.

ಹಾಲ್ಕುರಿಕೆ ಫೀಡರ್ ಕಾಲುವೆ ಮೂಲಕ ನೀರು: ತಾಲೂಕಿನಲ್ಲಿ ಸೌಲಭ್ಯ ಪಡೆಯುವ ಕೆರೆಗಳ ನೀರಿನ ಸಂಗ್ರಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲ ನಷ್ಟಗಳನ್ನು ಒಳಗೊಂಡಂತೆ 733 ಎಂಸಿಎಫ್‌ಟಿ ನೀರನ್ನು ತುಮಕೂರು ಶಾಖಾ ನಾಲೆ 45ನೇ ಕಿಮೀ ನಿಂದ 60 ದಿನಗಳ ಕಾಲಾವಧಿಯಲ್ಲಿ 6.85ಕಿಮೀ ಉದ್ದದ ತೆರದ ಫೀಡರ್ ಕಾಲುವೆ ಹಾಗೂ 11.59ಕಿಮೀ ಉದ್ದದ ಚಿಕ್ಕನಾಯಕನಹಳ್ಳಿ ಶಾಖಾ ವಿತರಣಾ ಫೀಡರ್ ಕಾಲುವೆ ಮೂಲಕ ಮತ್ತು 20.45ಕಿಮೀ ಉದ್ದದ ಹಾಲ್ಕುರಿಕೆ ಶಾಖಾ ವಿತರಣಾ ಫೀಡರ್ ಕಾಲುವೆ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕಿನ 21 ಕೆರೆಗಳಿಗೆ ಸೌಲಭ್ಯ ಸಿಗಲಿದೆ.

ರೈತರ ಸಹಕಾರ ಮರೆಯುವಂತಿಲ್ಲ : ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನೀರು ಹರಿಯುವಲ್ಲಿ ಸಾಕಷ್ಟು ಜನರ ಶ್ರಮವಿದೆ. 500ಕ್ಕೂ ಹೆಚ್ಚು ರೈತರ ಒಟ್ಟು 350 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಂಡಿದ್ದು ಈ ಹಿಂದಿನ ಕಾನೂನಿನಂತೆ ಸಿಕ್ಕ ಪರಿಹಾರ ಕಡಿಮೆ. ಇನ್ನೂ ಸಾಕಷ್ಟು ರೈತರು ಸರ್ಕಾರದಿಂದ ಪರಿಹಾರ ಕೈಸೇರುವ ಮುಂಚೆಯೇ ಭೂಮಿ ಬಿಟ್ಟುಕೊಟ್ಟು ತ್ಯಾಗ ಮಾಡಿದ್ದಾರೆ. ಇವರೆಲ್ಲರಿಗೂ ಕೊಟ್ಟ ಮಾತಿನಂತೆ ಕೈತುಂಬಾ ಪರಿಹಾರ ಕೊಡಿಸುವ ಹೊಣೆ ಸ್ಥಳೀಯ ಶಾಸಕರೂ ಆಗಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಮೇಲಿದೆ.

ಸಾಸಲು ಕೆರೆಗೆ ಸಂಪರ್ಕವಿರುವ ನಾಲೆ ಬಹುತೇಕ ಸಿದ್ಧವಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ನಾಲೆಯಲ್ಲಿ ನೀರು ಹರಿಯುವ ವಿಶ್ವಾಸವಿದ್ದು ಇದಕ್ಕಾಗಿ ಸಹಕರಿಸಿದ ರೈತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ, ಉಳಿದ ನಾಲೆ ಕಾಮಗಾರಿಯೂ ಇಷ್ಟೇ ವೇಗದಲ್ಲಿ ಮುಂದುವರಿಯಲಿದೆ. ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net