ಅಣಕಿಸಿದವರೇ ಹೇಮೆ ಬಗ್ಗೆ ಮಾತನಾಡ್ತಿದ್ದಾರೆ ; ನೀರಾವರಿ ಹೋರಾಟದ ಹಾದಿ ತೆರೆದಿಟ್ಟ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಿರಣ್‌ಕುಮಾರ್

20 c n halli Hemavathi Neravari yojane photo 1
Published on

ಚಿಕ್ಕನಾಯಕನಹಳ್ಳಿ : ದಶಕಗಳ ಹೋರಾಟದ ಫಲವಾಗಿ ತಾಲೂಕಿಗೆ ಹೇಮಾವತಿ ಹರಿದಿದ್ದು, ಯೋಜನೆಗೆ ಹೋರಾಡಿದ ನೈಜ ಹೋರಾಟಗಾರರನ್ನು ಶೆಟ್ಟಿಕೆರೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ನೇತೃತ್ವದಲ್ಲಿ ಬುಧವಾರ ಸನ್ಮಾನಿಸಲಾಯಿತು.

ಮಾಜಿ ಶಾಸಕ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‌ಕುಮಾರ್ ಹಾಗೂ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಸಾಗರ ಹರಿದುಬಂದಿತ್ತು. ನೀರಾವರಿ ಹೋರಾಟ ನಡೆದು ಬಂದ ದಾರಿಯನ್ನು ಎಳೆಎಳೆಯಾಗಿ ಜನರ ಮುಂದಿಟ್ಟ ಕೆ.ಎಸ್.ಕಿರಣ್‌ಕುಮಾರ್, ಯೋಜನೆ ಸಾಕಾರಕ್ಕೆ ಸಹಕಾರ ನೀಡಿದ್ದ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಜಗದೀಶ್‌ಶೆಟ್ಟರ್ ಮತ್ತಿತರರ ಕೊಡುಗೆಯನ್ನು ಸ್ಮರಿಸಿದರು.

ನಾನು ಶಾಸಕನಾಗಿದ್ದಾಗ ತಿಮ್ಮಲಾಪುರ ಹಾಗೂ ಹುಳಿಯಾರು ಕೆರೆಗಳಿಗೆ ನೀರು ಹರಿಸುವ ಬಗ್ಗೆ ಕನಸು ಕಂಡಿದ್ದೆ. ನಂತರದಲ್ಲಿ ಸಾಸಲು ಕೆರೆ ಮೂಲಕ ನೀರು ತರಲು ಸಾಧ್ಯ ಎಂಬ ಬಗ್ಗೆ ಪರಮಶಿವಯ್ಯ ವರದಿ ಬಗ್ಗೆ ತಿಳಿದು 2006ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್‌ವೈ ಅವರ ಮನವೊಲಿಸಿ ಮಂಜೂರಾತಿ ಕೊಡಿಸಿದ್ದೇ ಈ ಕಾರ್ಯದಲ್ಲಿ ನೂರಾರು ಹೋರಾಟಗಾರರು ನನಗೆ ಬೆಂಬಲವಾಗಿ ನಿಂತರು ಎಂದರು.

ಈ ಯೋಜನೆಗೆ 1996ರಲ್ಲೇ ನೀರಿನ ಹಂಚಿಕೆ ಮಾಡಿಸಿದ್ದೆ ಎಂದು ಸುಳ್ಳು ಹೇಳುವ ರಾಜಕಾರಣಿ ನಮ್ಮಲ್ಲಿದ್ದಾರೆ. ಇದೇ ಶೆಟ್ಟಿಕೆರೆಯಲ್ಲಿ ಭಾಷಣ ಮಾಡುವಾಗ ‘ಚೊಂಬಿನಲ್ಲಿ ನೀರು ತರಬೇಕು’ ಎಂದು ಮೂದಲಿಸಿದ್ದವರೇ ಯೋಜನೆ ನನ್ನಂದಲೇ ಆಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಷ್ಟಕ್ಕೆ ನಮ್ಮ ಹೋರಾಟ ನಿಂತಿಲ್ಲ, ತಾಲೂಕಿನ ಎಲ್ಲ ಕೆರೆಗಳಿಗೂ ನೀರು ಹರಿಯಲೇಬೇಕು ಎಂದು ಗುಡುಗಿದರು. ತಾಲೂಕಿಗೆ ಹೇಮಾವತಿ ಹರಿದಿದ್ದರೆ ಇಲ್ಲಿನ ಜನರ ಹೋರಾಟವೇ ಕಾರಣ. ಹಾಗಾಗಿ, ನಿಮ್ಮನ್ನು ಅಭಿನಂದಿಸುತ್ತೇನೆ. ಹೋರಾಟಕ್ಕೆ ಕಾರಣರಾದ ಎಲ್ಲ ಸಂಘ, ಸಂಸ್ಥೆಗಳ ಮುಖಂಡರು, ಮಠಾಧೀಶರನ್ನು ಅಭಿನಂದಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಭಾವುಕರಾದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ನಾಯಕರಾಗುತ್ತಾರೆ, ನಡಿಗೆಯಲ್ಲಿ ರಾಜಭವನಕ್ಕೆ ಹೋಗಿ ಮನವಿ ಸಲ್ಲಿಸಿದ್ದ ಮಾಜಿ ಶಾಸಕ ಬಿ.ಲಕ್ಕಪ್ಪ ಅವರ ಕೊಡುಗೆಯೂ ಯೋಜನೆಗಿದೆ. ಡಿ.ದೇವರಾಜ ಅರಸು ಜಿಲ್ಲೆಗೆ ಹೇಮಾವತಿ ಹರಿಸಿದ್ದರು, ವೀರೇಂದ್ರ ಪಾಟೀಲ್, ರಾಜಶೇಖರಮೂರ್ತಿ ನೆರವು ಕೂಡ ಇದೆ ಎಂದರು.

ಕುಪ್ಪೂರು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಡೆಕೆರೆ ಶ್ರೀಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಅರಸೀಕೆರೆ ಯಳನಡು ಮಠದ ಶ್ರೀಜ್ಞಾನಪ್ರಭುಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಶಿಡ್ಲಕೋಣ ವಾಲ್ಮೀಕಿ ಶ್ರೀ ಸಂಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎಂ.ಜಗದೀಶ್, ಇಂಜಿನಿಯರ್ ವೇದಾಂತಮೂರ್ತಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಪಂ ಸದಸ್ಯ ಮಹಾಲಿಂಗಯ್ಯ, ಜಿಪಂ ಮಾಜಿ ಸದಸ್ಯರಾದ ಪಂಚಾಕ್ಷರಿ, ಬುಳ್ಳೇನಹಳ್ಳಿ ಶಿವಪ್ರಕಾಶ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಎಸ್.ಜಿ.ಪರಮೇಶ್ವರಪ್ಪ, ಕವಿತಾಕಿರಣ್‌ಕುಮಾರ್ ಮಾತನಾಡಿದರು.

ನೀರಾವರಿ ಹೋರಾಟಗಾರರಾದ ಶರತ್‌ಕುಮಾರ್, ಸಿ.ಟಿ.ಗುರುಮೂರ್ತಿ, ಸಿ.ಎನ್.ಮಂಜುನಾಥ್, ಗಂಗಾಧರ್, ಹುಳಿಯಾರು ಶ್ರೀನಿವಾಸ್, ಕೆ.ಜಿ.ಕೃಷ್ಣೇಗೌಡ, ಸಿ.ಡಿ.ಚಂದ್ರಶೇಖರ್, ಅಜ್ಜೇನಹಳ್ಳಿ ರಮೇಶ್‌ಕುಮಾರ್, ಬಿಜೆಪಿ ಮುಖಂಡರಾದ ಶ್ರೀವಾಸಮೂರ್ತಿ, ಮೈಸೂರಪ್ಪ, ಹನುಮಜಯ, ಲೋಕೇಶ್, ವಿಶ್ವನಾಥ್ ಇದ್ದರು.

ಗಂಗಾಪೂಜೆ, ಬಾಗಿನ ಅರ್ಪಣೆ : ಹುಳಿಯಾರು ಹೋಬಳಿ ವಿವಿಧ ಗ್ರಾಮಗಳಿಂದ ನೂರಾರು ಬೈಕ್‌ಗಳ ಮೂಲಕ ಸಮಾರಂಭಕ್ಕೆ ಕಿರಣ್‌ಕುಮಾರ್ ಅಭಿಮಾನಿಗಳು ಆಗಮಿಸಿದ್ದರು. ಪಟ್ಟಣದ ವಿದ್ಯಾವಾರಿಧಿ ಶಾಲೆಯಿಂದ ಹೊರಟ ರ‌್ಯಾಲಿ ಅಣೆಕಟ್ಟೆ ಮಾರ್ಗವಾಗಿ ಚಿಕ್ಕನಾಯಕನಹಳ್ಳಿ ತಲುಪಿತು. ಕೆ.ಎಸ್.ಕಿರಣ್‌ಕುಮಾರ್ ಹಾಗೂ ಮುಖಂಡರು ತೆರೆದ ವಾಹನದಲ್ಲಿ ಜನರಿಗೆ ಕೈಬೀಸಿದರು. ಶೆಟ್ಟಿಕೆರೆ ಕೆಂಪಮ್ಮದೇವಿಗೆ ಪೂಜೆ ಸಲ್ಲಿಸಿ ಹೇಮಾವತಿ ನಾಲೆಯಿಂದ ಹರಿದ ನೀರಿನಿಂದ ಕೋಡಿ ಹೋಗಿದ್ದ ಶೆಟ್ಟಿಕೆರೆ ಕೆರೆಗೆ ಗಂಗಾಪೂಜೆ ಸಲ್ಲಿಸಿ ಕಿರಣ್‌ಕುಮಾರ್ ದಂಪತಿ ಬಾಗಿನ ಅರ್ಪಿಸಿದರು. ಜನಪದ ಕಲಾ ತಂಡಗಳು ಸಂಭ್ರಮ ಹೆಚ್ಚಿಸಿದ್ದವು. ಬೈಕ್‌ಗಳಲ್ಲಿ ಬಿಜೆಪಿ ಬಾವುಟ ಕಾಣಿಸಿದ್ದು ಬಿಟ್ಟರೆ ವೇದಿಕೆ ಪಕ್ಷಾತೀತವಾಗಿ ಮಾರ್ಪಟ್ಟಿತ್ತು. ಏಳು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಮಾರಂಭಕ್ಕೆ ಆಗಮಿಸಿದ್ದವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹರಿದುಬಂದ ಜನಸಾಗರ : ಹೇಮಾವತಿ ಯೋಜನೆಯ ಪ್ರಮುಖ ರೂವಾರಿ ಕೆ.ಎಸ್.ಕಿರಣ್‌ಕುಮಾರ್ ಎಂಬ ತಾಲೂಕಿನ ಜನರ ಭಾವನೆ ಬುಧವಾರದ ಸಮಾರಂಭದಲ್ಲಿ ವ್ಯಕ್ತವಾಯಿತು. ಪಕ್ಷಾತೀತ, ಜಾತ್ಯತೀತವಾಗಿ ಜನರು ಭಾಗವಹಿಸಿ ನೈಜ ಹೋರಾಟಗಾರರನ್ನು ಅಭಿನಂದಿಸಿದರು. ಇತ್ತೀಚೆಗೆ ನಡೆದ ಕಾರ್ಯಕ್ರಮ ಏಕವ್ಯಕ್ತಿ ಕೇಂದ್ರಿತವಾಗಿ ನಡೆದಿದ್ದಕ್ಕೆ ಆಕ್ರೋಶಗೊಂಡಿದ್ದ ಜನರು ನೈಜ ಹೋರಾಟಗಾರರನ್ನು ಅಭಿನಂದಿಸಲು ಸಿಕ್ಕ ಅವಕಾಶ ಬಳಸಿಕೊಂಡರು. ತಾಲೂಕಿನೆಲ್ಲೆಡೆಯಿಂದ ಜನಸಾಗರ ಹರಿದುಬಂದಿತ್ತು.

ಹೇಮಾವತಿ ಯೋಜನೆಯಲ್ಲಿ ಈಗ ಹರಿದಿರುವ ನೀರು ಜನರಿಗೆ ತೃಪ್ತಿ ತಂದಿಲ್ಲ. ತಾಲೂಕಿನ ಎಲ್ಲ 26 ಕೆರೆಗಳು ತುಂಬಿದಾಗ ಹೋರಾಟಕ್ಕೆ ಜಯಸಿಗಲಿದೆ. ಡಾ.ಶಿವಕುಮಾರ ಸ್ವಾಮೀಜಿ ಕೂಡ ಅಂದಿನ ಸಿಎಂಗೆ ದೂರವಾಣಿ ಮೂಲಕ ಯೋಜನೆಯ ಮಹತ್ವ ತಿಳಿಸಿದ್ದರು. ಇಂತಹ ಸಾಕಷ್ಟು ಜನರು ಯೋಜನೆಗೆ ಶ್ರಮಿಸಿದ್ದಾರೆ. ಅವರೆಲ್ಲರೂ ಅಭಿನಂದನೆಗೆ ಅರ್ಹ. ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದುಗೆ ಹೇಮಾವತಿ ನೀರು ಹರಿದಿದೆ ಎಂದರೆ ಇದಕ್ಕೆ ಕಿರಣ್‌ಕುಮಾರ್ ಶ್ರಮವಿದೆ. ಅವರ ಮೂರು ಯೋಜನೆಗಳಲ್ಲಿ ಒಂದು ಯೋಜನೆಯಲ್ಲಿ ನೀರು ಹರಿದಿದ್ದು ಇನ್ನೂ ಎರಡು ಯೋಜನೆ ಶೀಘ್ರ ಸಾಕಾರವಾಗಲಿ. ಇದು ಚಿಕ್ಕನಾಯಕನಹಳ್ಳಿಯಲ್ಲ, ಮುತ್ತು ಬೆಳೆಯುವ ಮುತ್ತುನಾಯಕನಹಳ್ಳಿ ಆಗಬೇಕಾಗಿದೆ. ವಾಲ್ಮೀಕಿ ಶ್ರೀ ಸಂಜಯಕುಮಾರ ಸ್ವಾಮೀಜಿ ಶಿಡ್ಲಕೊಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net