

ಮಂಡ್ಯ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಪರೋಪಕಾರಿಯಾಗಿ ಇತರರಿಗೆ ಮಾದರಿಯಾಗಿದ್ದರು. ಅವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ಶ್ರೀ ಶೈಲ ಮಲ್ಲಿಕಾರ್ಜುನನ ಮೇಲೆ ಅಪಾರ ಭಕ್ತಿ ಬೆಳೆಸಿಕೊಂಡ ಸಾತ್ವಿ 14ನೇ ಶತಮಾನದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ಬಣ್ಣಿಸಿದರು.
ಶಿವ ಕರೆದಾಗ ನಾಲ್ಕು ಜನ ನಮ್ಮನ್ನು ಒತ್ತೊಯ್ಯುವ ರೀತಿಯಲ್ಲಿ ಜೀವನ ಸಾಗಿಸಬೇಕು. ಹೇಮರೆಡ್ಡಿ ಮಲ್ಲಮ್ಮ ತಮ್ಮ ಬದುಕನ್ನು ಸಾರ್ವಜನಿಕರ ಸೇವೆಗೆ ಮುಡಿಪಾಗಿಟ್ಟ ಮಹಾನ್ ಸಾತ್ವಿ. ದೈವ ಪ್ರತ್ಯಕ್ಷವಾಗಿ ವರ ಕೇಳಿದಾಗ ನನ್ನ ಬಳಗಕ್ಕೆ ಬಡತನ ಬಾರದ ರೀತಿಯಲ್ಲಿ ಕಾಪಾಡೆಂದು ಕೇಳಿದವರು ಹೇಮರೆಡ್ಡಿ ಮಲ್ಲಮ್ಮ. ಅವರ ಬದುಕು ಮತ್ತು ಸತ್ಕಾರ್ಯ ನಮ್ಮೆಲ್ಲರಿಗೂ ಆದರ್ಶ. ಆಕೆಯ ತತ್ವ ಸಿದ್ಧಾಂತ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ಅಗತ್ಯ ಎಂದು ಹೇಳಿದರು.
ಕೃಷಿ ತಜ್ಞ ಡಾ.ಎಂ.ವೆಂಕಟೇಶ್, ಕೃಷಿ ಇಲಾಖೆಯ ನಿವೃತ ಅಧಿಕಾರಿ ಡಾ.ಎಂ.ಸಿ.ಶಿವರಾಜ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಮುಖಂಡರಾದ ದೇವರಾಜ್, ಆನಂದ್, ಅಮ್ಜದ್ ಪಾಷಾ ಇತರರಿದ್ದರು.