ಒಳಪಂಗಡ ಮರೆತರೆ ಸಮಾಜ ಅಭಿವೃದ್ಧಿ

25-SDMFEB-03
ಸೇಡಂ ತಾಲೂಕಿನ ಬಟಗೇರಾ(ಕೆ) ಬಳಿ ಶ್ರೀ ಹೇಮರಡ್ಡಿ ಮಲ್ಲಮ್ಮ-ವೇಮನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ರಾಮಲಿಂಗಾರಡ್ಡಿ ಉದ್ಘಾಟಿಸಿದರು. ಶ್ರೀ ವೇಮಾನಂದ ಸ್ವಾಮೀಜಿ, ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಶರಣಗೌಡ ಕಂದಕೂರ, ತಿಪ್ಪಣ್ಣಪ್ಪ ಕಮಕನೂರ ಇತರರಿದ್ದರು.
Published on

ಸೇಡಂ: ರಾಜ್ಯ ಸೇರಿ ದೇಶದ ವಿವಿಧೆಡೆ ರಡ್ಡಿ ಸಮಾಜದ ಜನರಿದ್ದಾರೆ. ಎಲ್ಲರೂ ನಮ್ಮಲ್ಲಿನ ಒಳಪಂಗಡದ ಭೇದಭಾವ ಮರೆತು ಒಗ್ಗಟ್ಟಾಗಿ ಸಂಘಟನೆ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ಸೇಡಂ-ಕೊಡಂಗಲ್ ರಸ್ತೆಯ ಬಟಗೇರಾ(ಕೆ) ಗ್ರಾಮ ಹತ್ತಿರ ನಿರ್ಮಿಸಿರುವ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ದೇಗುಲದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ತಾಲೂಕಿನ ಸಮಾಜದ ಜನರು ಇಂತಹ ಬೃಹತ್ ಯೋಜನೆ ಯಶಸ್ವಿಗೊಳಿಸಿದ್ದು ಸಂತಸ ತಂದಿದೆ ಎಂದರು.

ಸಮಾಜದಲ್ಲಿ ಹಲವು ದಾನಿಗಳಿದ್ದಾರೆ. ಆದರೆ ಜವಾಬ್ದಾರಿಯಿಂದ ಕೆಲಸ ಮಾಡುವ ವ್ಯಕ್ತಿತ್ವ ಬೇಕಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಭವ್ಯ ದೇವಾಲಯ ನಿರ್ಮಿಸಿದ್ದರಿಂದ ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು, ಕಲ್ಯಾಣ ಮಂಟಪ, ವಸತಿನಿಲಯ ನಿರ್ಮಿಸಬೇಕು. ಕಡಿಮೆ ದರ ನಿಗದಿಪಡಿಸಿ ಎಲ್ಲ ಜಾತಿ, ಜನಾಂಗದವರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಬಸವಾದಿ ಶರಣರ ತತ್ವಾದರ್ಶಗಳಿಂದ ಪ್ರೇರಣೆಯಾಗಿ ಹೇಮರಡ್ಡಿ ಮಲ್ಲಮ್ಮ ೧೪ನೇ ಶತಮಾನದಲ್ಲಿ ಶರಣೆಯಾಗಿ ಗುರುತಿಸಿಕೊಂಡು ಸಾತ್ವಿಕ ಬದುಕು ನಡೆಸಿದರು. ಇಂತಹ ಮಹಾತ್ಮರನ್ನು ನಮ್ಮ ಬದುಕಿಗೆ ಮಾರ್ಗದರ್ಶಕರನ್ನಾಗಿ ಸ್ವೀಕರಿಸಬೇಕು. ಆಗಲೇ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ನಾನು ಕ್ಷೇತ್ರದ ಶಾಸಕನಾಗಿ ಈ ಮಟ್ಟಕ್ಕೆ ಬೆಳೆಯಲು ರಡ್ಡಿ ಸಮಾಜದ ಕೊಡುಗೆ ದೊಡ್ಡದು. ಸಮಾಜದವರಿಗೆ ಅಗತ್ಯವಿರುವ ಎಲ್ಲ ಕೆಲಸ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಎರೆಹೊಸಳ್ಳಿಯ ಶ್ರೀ ವೇಮಾನಂದ ಸ್ವಾಮೀಜಿ, ಸಂಸದ ಡಾ.ಉಮೇಶ ಜಾಧವ್, ಶಾಸಕ ಶರಣಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ರಡ್ಡಿ ಜನಸಂಘದ ಶೇಖರರಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಮಾತನಾಡಿದರು.

ಹೇಮ-ವೇಮ ಟ್ರಸ್ಟ್ ಅಧ್ಯಕ್ಷ ಶರಣರಡ್ಡಿ ಜಿಲ್ಲೆಡಪಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಉಪ ಸಭಾಪತಿ ಚಂದ್ರಶೇಖರರಡ್ಡಿ ದೇಶಮುಖ ಮದನಾ, ಮಾಜಿ ಶಾಸಕರಾದ ಡಾ.ನಾಗರಡ್ಡಿ ಪಾಟೀಲ್, ಪ್ರಮುಖರಾದ ಮಾಣಿಕರಡ್ಡಿ ಹಾಶನಪಲ್ಲಿ, ಮುದ್ದಪ್ಪರಡ್ಡಿ ಕೊಡಂಗಲ್, ಭಾಗಣಗೌಡ ಸಂಕನೂರ, ನಾಗರಡ್ಡಿ ಕರದಾಳ, ವಿ.ಶಾಂತರಡ್ಡಿ, ಡಾ.ವಿಶ್ವನಾಥರಡ್ಡಿ, ಡಾ.ವಿಶಾಲಾಕ್ಷಿ ಕರಡ್ಡಿ, ಸತ್ಯಂರಡ್ಡಿ ಒಳಬಳ್ಳಾರಿ, ಡಾ.ವೀರಭದ್ರಪ್ಪ, ಶಂಕರರಡ್ಡಿ, ಕೃಷ್ಣಾರಡ್ಡಿ, ನಾಗಭೂಷಣ ರಡ್ಡಿ ಪಾಟೀಲ್ ಹೂಡಾ, ಶಿವಲಿಂಗರಡ್ಡಿ ಪಾಟೀಲ್ ಬೆನಕನಹಳ್ಳಿ, ಲತಾ ಹೇಮರಡ್ಡಿ ಪಾಟೀಲ್, ಪ್ರೊ.ಚನ್ನಾರಡ್ಡಿ ಪಾಟೀಲ್ ಇತರರಿದ್ದರು.

ಆರೋಗ್ಯ ಶಿಬಿರ, ಕೃತಿ ಬಿಡುಗಡೆ: ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಆರೋಗ್ಯ ಇಲಾಖೆ ಸಹಯೋಗದಡಿ ಆಯುಷ್ಮಾನ್ ಭಾರತ ಚೀಟಿ ವಿತರಿಸಲಾಯಿತು. ಮನೋವಿಜ್ಞಾನಿ ಡಾ.ವೆಂಕಟರಡ್ಡಿ ರುದ್ರವಾರ ರಚಿತ ಮಾತೆ ಮಲ್ಲಮ್ಮನ ಮಾರ್ಗದರ್ಶಕ ಮೌಲ್ಯಗಳು ಕೃತಿ ಲೋಕಾರ್ಪಣೆ ಮಾಡಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೇಮರಡ್ಡಿ ಮಲ್ಲಮ್ಮನವರ ಇಂತಹ ಸುಂದರ ಮಂದಿರ ನೋಡಿಲ್ಲ. ಇಲ್ಲಿನ ವಾತಾವರಣ ಬಹು ಸುಂದರವಾಗಿದೆ. ಹೈಮಾಸ್ಟ್ ದೀಪ ಇತರ ವ್ಯವಸ್ಥೆ ಕಲ್ಪಿಸಲು ನನ್ನ ಅನುದಾನದಲ್ಲಿ ೧೦ ಲಕ್ಷ ರೂ. ನೀಡುವೆ.
| ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net