ಸ್ತ್ರೀ ಸಮಾಜಕ್ಕೆ ಆದರ್ಶಪ್ರಾಯ ಹೇಮರಡ್ಡಿ ಮಲ್ಲಮ್ಮ

Hemaraddi Mallamma, the ideal for women society
ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಶಾಸಕ ಸಿದ್ದು ಸವದಿ, ತಹಸೀಲ್ದಾರ್ ಗಿರೀಶ ಸ್ವಾದಿ, ಕೃಷ್ಣ ಲೆಂಡಿ ಇದ್ದಾರೆ.
Published on

ರಬಕವಿ-ಬನಹಟ್ಟಿ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸ್ತ್ರೀ ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದು ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಾಯಕದ ಮೂಲಕ ಸಂಸಾರದ ನೊಗಕ್ಕೆ ಹೆಗಲು ಕೊಟ್ಟು, ಭಕ್ತಿ ಮಾರ್ಗದ ಮೂಲಕ ಅನುಭವಿಯಾದವಳು ಮಲ್ಲಮ್ಮ. ತಾನು ಬದುಕಿನಲ್ಲಿ ಕಂಡುಕೊಂಡ ಅನುಭವಗಳನ್ನು ಇತರರಿಗೆ ಹಂಚುವ ಮೂಲಕ ದಾರಿದೀಪವಾದರು. ಗೃಹಧರ್ಮ ಪಾಲಿಸುತ್ತ ನೋವುಂಡ ಸ್ಥಳದಲ್ಲೇ ನೋವಿಗೆ ಮದ್ದು ಮಾಡುತ್ತ ತನ್ನವರನ್ನು ಅಜ್ಞಾನದಿಂದ ಅರಿವಿನ ಕಡೆಗೆ ಕರೆತಂದು ಕಾಯಕದ ಮೂಲಕವೇ ಮಲ್ಲಿಕಾರ್ಜುನನ್ನು ಕಾಣಲು ಸಾಧ್ಯವಾಗಿಸಿದ್ದಾರೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ನಾಡಿನ ಚರಿತ್ರೆಯೊಳಗೆ ನೂರಾರು ರಾಣಿ-ಮಹಾರಾಣಿಯರು ಸಿಗಬಹುದು. ಹಾಗೆಯೇ ಸಾಂಸ್ಕೃತಿಕ-ಆಧ್ಯಾತ್ಮಿಕ ಸಾಧನೆ ಉತ್ತುಂಗಕ್ಕೇರಿದ ಅನುಭಾವಿ ಮಹಿಳೆಯರು ದೊರಕಬಹುದು. ಆದರೆ, ಹೇಮರಡ್ಡಿ ಮಲ್ಲಮ್ಮ ಅವರೆಲ್ಲರಿಗಿಂತ ಭಿನ್ನವಾಗಿ ಕುಟುಂಬದ ಗೃಹಿಣಿಯಾಗಿ ತನ್ನ ಮನೆಯೊಳಗೆ ನೂರಾರು ಕಷ್ಟ-ನೋವುಗಳ ನಡುವೇ ಬದುಕಿ ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಬದುಕು ತೋರಿಸಿಕೊಟ್ಟಿದ್ದಾರೆ. ಮಹಿಳೆಯನ್ನು ಗುರುವಾಗಿಸಿಕೊಂಡು, ಆ ಹೆಸರಿನ ಮೂಲಕವೇ ಗುರುತಿಸುವ ಏಕೈಕ ಸಮುದಾಯ ಹೇಮರಡ್ಡಿ ಮಲ್ಲಮ್ಮ ಸಮುದಾಯವಾಗಿದೆ ಎಂದರು.

ಕಂದಾಯ ಅಧಿಕಾರಿ ಪ್ರಕಾಶ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕುಂಬಾರ, ರವಿ ಹುಲ್ಲನ್ನವರ, ಚೇತನ ಭಜಂತ್ರಿ, ಕೃಷ್ಣ ಲೆಂಡಿ, ಸಿದ್ದಪ್ಪ ಮೇಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net