

ಚಿಕ್ಕಮಗಳೂರು: ಕಡೂರು ತಾಲೂಕು ಬಾಸೂರಿನಲ್ಲಿ 9,10 ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಹಾಗೂ ಧಾರ್ಮಿಕ ಸಮಾವೇಶ ಆಯೋಜಿಸಲಾಗಿದೆ ಎಂದು ಬಡಗನಾಡು ಶ್ರೀ ಹೇಮರಡ್ಡಿಮಲ್ಲಮ್ಮ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಬಿ.ಕೆ.ವಸಂತಕುಮಾರ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ರೀಡಾಂಗಣದಲ್ಲಿ ಎರಡು ದಿನದ ಕಾರ್ಯಕ್ರಮ ನಡೆಯಲಿದ್ದು, ಮೇ 9ರಂದು ಹೊಳೆಪೂಜೆ, ಉತ್ಸವ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಆನಂದಪುರದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕಾಗಿನೆಲೆ ಮಠದ ಈಶ್ವರಾನಂದ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಅಧ್ಯಕ್ಷ ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲೆಯ ಶಾಸಕರು, ಸಾಹಿತಿ ಗೊ.ರು.ಚನ್ನಬಸಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಹಾಗೂ ಸಿಡಿಮದ್ದು ಕಾರ್ಯಕ್ರಮ ಏರ್ಪಡಿಸಲಾಗಿದೆ. 10ರಂದು ವಿವಿಧ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಮೂವರು ಜಗದ್ಗುರುಗಳ ಮೆರವಣೆಗೆ ನಡೆಯಲಿದೆ. ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮಪಂಡಿತ ಶಿವಾಚಾರ್ಯರು, ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜು ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಜನಾರ್ಧನ ರೆಡ್ಡಿ, ಎಂ.ಕೆ.ಪ್ರಾಣೇಶ್, ಸಿ.ಟಿ.ರವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನದ ನಂತರ ಗಂಗಾವತಿ ಪ್ರಾಣೇಶ್ ಅವರಿಂದ ನಗೆಹಬ್ಬವಿದ್ದು, ರಾತ್ರಿ 9 ಗಂಟೆಗೆ ಸರಿಗಮಪ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ ಆರೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಅನುಶ್ರೀ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಬಿ.ಎಸ್.ಪ್ರಭು, ಉಪಾಧ್ಯಕ್ಷ ಬಿ.ಸಿ.ಲಿಂಗರಾಜು, ಪದಾಧಿಕಾರಿ ಸಿ. ಶಂಕರಪ್ಪ ಮತ್ತಿತರರಿದ್ದರು.