

ರಾಯಚೂರು: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಆಚಾರ, ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ತಹಸೀಲ್ದಾರ್ ಸುರೇಶ ವರ್ಮ ಹೇಳಿದರು.
ಇದನ್ನೂ ಓದಿ:ಬಸವಣ್ಣ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಪತಿ ಭಕ್ತಿಗೆ ಹೇಮರಡ್ಡಿ ಮಲ್ಲಮ್ಮ ಉತ್ತಮ ಉದಾಹರಣೆ. ಜೀವನದಲ್ಲಿ ಹಲವು ಕಷ್ಟ ನಷ್ಟ ಅನುಭವಿಸಿದ ಮಲ್ಲಮ್ಮರ ಜೀವನ ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದರು.
ಶ್ರೀಶೈಲ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅರ್ಚಕ ಸಿ.ಎಂ.ಗುರುಪಾದಯ್ಯ ಸ್ವಾಮಿ ಮಾತನಾಡಿ, ಮಲ್ಲಮ್ಮ ಅತ್ತೆ, ಮಾವ, ಗಂಡನ ಸೇವೆಯಲ್ಲಿಯೇ ದೇವರನ್ನು ಕಂಡವರು. ಗಂಡನ ಮನೆಗೆ ಹೋಗುವಾಗ ತಂದೆ-ತಾಯಿ ಹೇಳಿದ ನೀತಿ ಪಾಠವನ್ನು ಮಲ್ಲಮ್ಮ ಎಂತಹ ಕಷ್ಟಗಳು ಬಂದರೂ ಪಾಲಿಸಿಕೊಂಡು ಬಂದು ಆದರ್ಶಪ್ರಾಯರಾಗಿ ಮೆರೆದಿದ್ದಾರೆ. ಬೆಟ್ಟದಷ್ಟು ಕಷ್ಟಗಳು ಎದುರಾದರೂ ಸಹಿಸಿಕೊಂಡು ತನ್ನ ಸನ್ನಡತೆಯಿಂದ ಆದರ್ಶ ಸೊಸೆಯಾಗಿ, ಆಧ್ಯಾತ್ಮಿಕವಾಗಿ ಸಾಧನೆ ಮಾಡಿದ್ದಾರೆ. ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ನೆಲೆಯೂರಿರುವ ಶಿವಶರಣೆಯರಾದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ, ನೆಲ್ಲೂರ ನಿಂಬೆಕ್ಕ, ಸಜ್ಜಲಗುಡ್ಡದ ಶರಣಮ್ಮ ಮತ್ತಿತರರ ಸಾಲಿಗೆ ಸೇರ್ಪಡೆಯಾಗಿದ್ದಾರೆ ಎಂದರು.
ಸಮಾಜದ ಮುಖಂಡರಾದ ಬಸನಗೌಡ ಬ್ಯಾಗವಾಟ್, ಸಿ.ಎಸ್.ಪಾಟೀಲ್, ಶರಣುಭೂಪಾಲ ನಾಡಗೌಡ, ಶರಣಬಸವ ಜೋಳದಡಗಿ, ಭೂಪಾಲ ನಾಡಗೌಡ, ಸಿದ್ದನಗೌಡ ಸಾನಬಾಳ, ಸಿದ್ದನಗೌಡ ಅಮರಖೇಡ್, ಮಲ್ಲಿಕಾರ್ಜುನ ಮೇಟಿ, ವಿ.ಎ.ಮಾಲಿ ಪಾಟೀಲ್, ರಾಮನಗೌಡ ಏಗನೂರು, ಪವನ ಕಿಶೋರ ಪಾಟೀಲ್, ನಾಗನಗೌಡ ಹರವಿ, ಕೇಶವರಡ್ಡಿ, ಅಮರೇಗೌಡ ಹಂಚಿನಾಳ, ಲಕ್ಷ್ಮೀಕಾಂತ ರಡ್ಡಿ, ಶರಣಮ್ಮ ಕಾಮರಡ್ಡಿ, ಶರಣಬಸವ ಬಲ್ಲಟಗಿ ಇತರರಿದ್ದರು.