ಹೇಮಾ ನಾಯಕ, ಲಕ್ಷ್ಮಣ ಕೌಂಟಿಗೆ ಬೆರಗು ಪ್ರಶಸ್ತಿ

BERAGU AWARD
ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯ ಪ್ರಶಸ್ತಿಗೆ ಆಯ್ಕೆಯಾದ ಹೇಮಾ ನಾಯಕ ಹಾಗೂ ಡಾ.ಲಕ್ಷ್ಮಣ ಕೌಂಟೆ.
Published on

ವಿಜಯಪುರ: ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ ಪ್ರೊ.ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಹೇಮಾ ನಾಯಕ ಅವರ ‘ನೋವಿಗೂ ಇದೆ ಚಲನೆ’ ಕಾವ್ಯಹಸ್ತಪ್ರತಿ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2022ರ ಸಾಲಿನ ಪುಸ್ತಕ ಪ್ರಶಸ್ತಿಗೆ ಡಾ. ಲಕ್ಷ್ಮಣ ಕೌಂಟೆ ಅವರ ’ಧರೆಗೆ ದೊಡ್ಡವರು’ ಕಾದಂಬರಿ ಆಯ್ಕೆಯಾಗಿದೆ.

ಬೆರಗು ಪ್ರಕಾಶನವು ಕಳೆದ ಐದು ವರ್ಷಗಳಿಂದಲೂ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು, ಪ್ರಸಕ್ತ ವರ್ಷದ ಪ್ರಶಸ್ತಿಗೆ 104 ಪುಸ್ತಕಗಳು ಹಾಗೂ ಹಸ್ತಪ್ರತಿ ಸ್ಪರ್ಧೆಗೆ 69 ಹಸ್ತಪ್ರತಿಗಳು ನಾಡಿನ ವಿವಿಧ ಭಾಗಗಳಿಂದ ಮತ್ತು ಮಹಾರಾಷ್ಟ್ರ, ಕೇರಳ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದವು. ಖ್ಯಾತ ಕವಿ, ಕತೆಗಾರ ವಾಸುದೇವ ನಾಡಿಗ ಅವರು ತೀರ್ಮಗಾರರಾಗಿ ಕಾರ್ಯನಿರ್ವಹಿಸಿದ್ದರು.

ಹಸ್ತಪ್ರತಿ ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಬೆರಗು ಪ್ರಕಾಶನವು ಹಸ್ತಪ್ರತಿಯನ್ನು ಪ್ರಕಟಿಸುವ ಮೂಲಕ ಗೌರವಿಸಲಿದೆ ಹಾಗೂ ಪುಸ್ತಕ ಪ್ರಶಸ್ತಿಯು ಐದು ಸಾವಿರ ರೂ.ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಮುಂದಿನ ತಿಂಗಳು ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮೂಲತಃ ಅಂಕೋಲಾದವರಾದ ಹೇಮಾ ನಾಯಕ ಅವರು ಕೇಂದ್ರ ನಾಗರಿಕ ಸೇವೆ ಕರ್ತವ್ಯ ನಿಮಿತ್ತ ಪ್ರಸ್ತುತ ಮೇಘಾಲಯದಲ್ಲಿ ನೆಲೆಸಿದ್ದಾರೆ. ಡಾ.ಲಕ್ಷ್ಮಣ ಕೌಂಟೆ ಅವರು ಕಲಬುರಗಿ ನಿವಾಸಿಯಾಗಿದ್ದು ಐತಿಹಾಸಿಕ ಮತ್ತು ಪೌರಾಣಿಕ ವಸ್ತುಗಳನ್ನು ಆಯ್ದುಕೊಂಡು ಐವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ ಎಂದು ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮಿ ಆರ್.ಕತ್ತಿ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net