

ಹುಬ್ಬಳ್ಳಿ : ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನಾದಿಂದ ಮೇ 29ರಿಂದ ರಾಜ್ಯಾದ್ಯಂತ ಹೆಲ್ಪ್ಲೈನ್ ಆರಂಭಿಸುತ್ತಿದ್ದೇವೆ. ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಸುವ ನಿಧಾರವನ್ನೂ ಮಾಡಿದ್ದೇವೆ ಎಂದು ಸೇನಾ ಮುಖಂಡ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.
ಹತ್ಯೆಗೀಡಾದ ಅಂಜಲಿಯ ಇಲ್ಲಿನ ವೀರಾಪುರ ಓಣಿಯ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದ ನಂತರ ಗಂಗಾಧರ ಕುಲಕರ್ಣಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜೂ. 9ರಂದು ಹುಬ್ಬಳ್ಳಿಯಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆರಂಭಿಸಲಾಗುವುದು. ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಇದು ಕಾನೂನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಮಾಡುತ್ತಿರುವ ಕಾರ್ಯಕ್ರಮ ಅಲ್ಲ. ಬದಲಾಗಿ, ಮಹಿಳೆಯರಿಗೆ ಸ್ವರಕ್ಷಣೆಯ ತರಬೇತಿ ನೀಡುವ ಕಾರ್ಯಕ್ರಮ. ಇಂತಹ ತರಬೇತಿ ಇರದ ಕಾರಣ ನೇಹಾ ಹಿರೇಮಠ, ಅಂಜಲಿ ಅವರನ್ನು ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು. ಇದು ನಮ್ಮ ಸಹೋದರಿಯರಿಗಾಗಿ ಮಾಡುತ್ತಿರುವ ಕಾರ್ಯಕರಮ ಎಂದು ತಿಳಿಸಿದರು.
ಅಂಜಲಿಯ ಕೊಲೆ ಆರೋಪಿಯನ್ನು ಎನ್ಕೌಂಟರ್ ಮಾಡಬೇಕು. ಸರ್ಕಾರದಿಂದ ಈ ಕೆಲಸ ಮಾಡಲು ಆಗದಿದ್ದರೆ ನಮಗೆ ಒಪ್ಪಿಸಿ. ಹಿಂದು ಸಂಘಟನೆಗಳು ಇಂತಹ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುತ್ತವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹತ್ಯೆ ಪ್ರಕರಣವನ್ನು ಸಹ ಪರ್ಸನಲ್ ಎನ್ನುತ್ತಾರೆಯೇ ? ಎಂದು ಪ್ರಶ್ನಿಸಿದ ಗಂಗಾಧರ ಕುಲಕರ್ಣಿ, ನೇಹಾ ಹತ್ಯೆ ಪ್ರಕರಣದಲ್ಲಿ ನೀಡಿದ ಹೇಳಿಕೆಯನ್ನು ಇಲ್ಲಿಯೂ ನೀಡುತ್ತೀರಾ ? ಎಂದರು.