ಬೆಟ್ಟಿಂಗ್ ದಂಧೆ ಸಂಘಟನೆಗಳ ಕ್ಯಾಂಪೇನ್: ಜನರಿಗೆ ಕರಪತ್ರ ವಿತರಿಸಿ ಜಾಗೃತಿ

Helpline released by Police Department Mandya
Published on

ಮಂಡ್ಯ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ, ಅಕ್ರಮ ಮದ್ಯ ಮಾರಾಟ ವಿರುದ್ಧ ಸಮರ ಸಾರಿರುವ ಜನಪರ ಸಂಘಟನೆಗಳು ಎರಡನೇ ಹಂತವಾಗಿ ಜಾಗೃತಿ ಅಭಿಯಾನ ನಡೆಸುತ್ತಿವೆ. ಅದರಂತೆ ಕರಪತ್ರ ಮುದ್ರಿಸಿ ಜನರಿಗೆ ವಿತರಿಸಿ ಜೂಜಾಟದಿಂದಾಗುತ್ತಿರುವ ದುಷ್ಪರಿಣಾಮ ಹಾಗೂ ಮಕ್ಕಳು ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಿಳಿ ಹೇಳುತ್ತಿದ್ದಾರೆ.

ಬೆಟ್ಟಿಂಗ್ ದಂಧೆಗೆ ಸಿಲುಕಿ ಹಳೇ ಬೂದನೂರು ಗ್ರಾಮದ ತ್ಯಾಗರಾಜು ಎಂಬಾತ ಆತ್ಮಹತ್ಯೆ ಪ್ರಕರಣ ಹೊರಬರುತ್ತಿದ್ದಂತೆ ಸಂಘಟನೆಗಳು ಹೋರಾಟ ತೀವ್ರಗೊಳಿಸಿದವು. ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ‘ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ನಿಲ್ಲಿಸಿ’ ಯುವಕರನ್ನ ರಕ್ಷಣೆ ಮಾಡುವಂತೆ ಆಗ್ರಹಿಸಿದರು. ಮಾತ್ರವಲ್ಲದೆ ಹದಿನೈದು ದಿನದಲ್ಲಿ ಕ್ರಮ ವಹಿಸುವಂತೆ ಗಡುವು ನೀಡಿದ್ದರು.

ಸಹಾಯವಾಣಿ ತೆರೆದ ಖಾಕಿ: ಹೋರಾಟಗಾರರ ಆಗ್ರಹಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ಇಲಾಖೆ ‘ಸಹಾಯವಾಣಿ ತೆರೆದು’ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆ ಬಗ್ಗೆ ದೂರುಗಳನ್ನು ಸಲ್ಲಿಸಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆ ಹೊರಡಿಸಿತು. ಇದು ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು ಎನಿಸಿಕೊಂಡಿತು.

ಇನ್ನೊಂದೆಡೆ ತ್ಯಾಗರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಆಡಲು ಸಾಲಕ್ಕಾಗಿ ಅಡವಿಟ್ಟದನ್ನು ಎನ್ನಲಾಗಿದ್ದ ಚೆಕ್ ಹಾಗೂ ಪ್ರನೋಟ್‌ಗಳನ್ನು ಆತನ ಕುಟುಂಬಕ್ಕೆ ವಾಪಸ್ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ ಜೂಜಾಟದಲ್ಲಿ ತೊಡಗಿಸಿಕೊಂಡಿರುವ ಕೆಲವರ ಪರೇಡ್ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಯಾವುದೇ ರೀತಿಯ ಅಹಿತಕರ ಚಟುವಟಿಕೆಯಲ್ಲಿ ತೊಡಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ತಿಥಿಯಲ್ಲಿ ಕರಪತ್ರ ವಿತರಣೆ: ಹೋರಾಟದ ಬಳಿಕ ಜನಪರ ಸಂಘಟನೆಗಳು ಇದೀಗ ಜನರಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿವೆ. ಪೊಲೀಸ್ ಇಲಾಖೆಯಿಂದ ತೆರೆದಿರುವ ಸಹಾಯವಾಣಿ ಸಂಖ್ಯೆಯನ್ನು ಮುದ್ರಿಸಿದ ಕರಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಅದರಂತೆ ಮಂಗಳವಾರ ಹಳೇಬೂದನೂರು ಗ್ರಾಮದಲ್ಲಿ ನಡೆದ ತ್ಯಾಗರಾಜು ತಿಥಿ ಕಾರ್ಯಕ್ರಮದಲ್ಲಿ ಆಗಮಿಸಿದವರಿಗೆ ಕರಪತ್ರ ನೀಡಲಾಯಿತು. ಅಕ್ರಮ ಚಟುವಟಿಕೆ ಬಗ್ಗೆ ದೂರು ಕೊಡಿ. ಮಾತ್ರವಲ್ಲದೆ ಮಾಹಿತಿ ನೀಡುವಂತೆ ನಿಮ್ಮ ಅಕ್ಕಪಕ್ಕದವರಿಗೂ ತಿಳಿಸಿ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net