

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿತೆರಿಗೆ ಪಾವತಿಸುವವರಿಗಾಗಿ ಜಾರಿಗೊಳಿಸಿರುವ ಒಂದು ಬಾರಿ ಪರಿಹಾರ ಯೋಜನೆಯು (ಒಟಿಎಸ್) ಇದೇ ಜು.31ಕ್ಕೆ ಮುಗಿಯಲಿದ್ದು, ಶುಲ್ಕ ನಿಗದಿ ಅಥವಾ ಪಾವತಿಯಲ್ಲಿ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ವಿಷಯ ತಿಳಿಸಿದರು.
ನಗರದಲ್ಲಿ ಒಟಿಎಸ್ ಯೋಜನೆಯಡಿ 4 ಲಕ್ಷ ಸುಸ್ತಿದಾರರಿದ್ದು, ಈ ಪೈಕಿ ಈವರೆಗೆ 80 ಸಾವಿರ ಮಂದಿ ಸೌಲಭ್ಯವನ್ನು ಸದುಪಯೋಗ ಪಡೆದಿದ್ದಾರೆ. ಉಳಿದ 3.20 ಲಕ್ಷ ಸುಸ್ತಿದಾರರಿಗೆ ಜು.31ರವರೆಗೆ ಮಾತ್ರ ಅವಕಾಶವಿದ್ದು, ಸುಸ್ತಿದಾರರು ಬೇಗನೆ ಬಾಕಿ ಹಣ ಪಾವತಿಸಬೇಕು. ಆ.1ರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದು, ರಿಯಾಯಿತಿ ಸೌಲಭ್ಯವನ್ನು ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆಗುಂಡಿ ಮುಚ್ಚಲು ವಿನೂತನ ತಂತ್ರಾಂಶ:
ಪಾಲಿಕೆ ವ್ಯಾಪ್ತಿಯಲ್ಲಿನ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದ್ದು, ಹೊಸದಾಗಿ ಸೃಷ್ಟಿಯಾಗುವ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ. ರಸ್ತೆಗುಂಡಿಗಳ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲು ವಿನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ತಂತ್ರಾಂಶದಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ನಾಗರಿಕರಿಗೂ ಗುಂಡಿಗಳು ಬಿದ್ದಿರುವ ಬಗ್ಗೆ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗುವುದು. ಇದರಿಂದ ತ್ವರಿತಗತಿಯಲ್ಲಿ ರಸ್ತೆಗುಂಡಿ ಮುಚ್ಚಲು ಸಹಕಾರಿಯಾಗಲಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್. ದೀಪಕ್, ರಮೇಶ್, ಶಿವಾನಂದ್, ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ, ಪ್ರೀತಿ ಗೆಹ್ಲೋಟ್, ವಲಯ ಮುಖ್ಯ ಅಭಿಯಂತರರು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.