ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ

RAMBHAPURI PEETHA 1
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭ ಉದ್ಘಾಟನೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು, ಮಂಜುನಾಥ ಕುನ್ನೂರು, ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಚನ್ನವೀರ ಶಿವಾಚಾರ್ಯ, ಶ್ರೀ ಚಂದ್ರಶೇಖರ ಶಿವಾಚಾರ್ಯ, ವಿವಿಧ ಮಠಗಳ ಶಿವಾಚಾರ್ಯರು ಪಾಲ್ಗೊಂಡಿದ್ದರು.
Published on

ಬಾಳೆಹೊನ್ನೂರು: ಮನುಷ್ಯ ಕ್ಷಣಿಕ ಸುಖಕ್ಕಾಗಿ ಶಾಶ್ವತ ಸುಖ ಕಳೆದುಕೊಳ್ಳುತ್ತಿದ್ದಾನೆ. ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ನಿಮಿತ್ತ ಸಂಯೋಜಿಸಿದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಿಗೆ ಅರ್ಥ, ಆಯುಷ್ಯ, ಅರಿವು ಮುಖ್ಯ. ಅರಿವು ಇಲ್ಲದ ಜೀವನ ವ್ಯರ್ಥ. ಗುರಿ, ನೆಮ್ಮದಿ ಇಲ್ಲದಿದ್ದರೆ ಜೀವನದಲ್ಲಿ ಶ್ರೇಯಸ್ಸು ಕಾಣುವುದು ಕಷ್ಟ. ಸ್ವಾರ್ಥ, ಸಂಕುಚಿತ ಭಾವನೆ ಹೆಚ್ಚುತ್ತಿರುವ ಕಾರಣ ಸಮಾಜದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸಮಷ್ಠಿ ಪ್ರಜ್ಞೆ ಇಲ್ಲದಿರುವುದರಿಂದ ಅಪನಂಬಿಕೆ ಮತ್ತು ಅವಿಶ್ವಾಸ ಬೆಳೆಯುತ್ತಿವೆ ಎಂದರು.
ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ನಾಡಿನ ತುಂಬೆಲ್ಲ ನೆಲೆಗೊಂಡಿದ್ದಾನೆ. ಅವನು ಎಲ್ಲಿಯೇ ಪೂಜೆಗೊಂಡರೂ ಆತನ ಮೂಲ ಶಕ್ತಿ ಕೇಂದ್ರ ರಂಭಾಪುರಿ ಪೀಠದ ವೀರಭದ್ರಸ್ವಾಮಿ ಎಂಬುದನ್ನು ಮರೆಯಲಾಗದು. ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಸೇವಾ ಸೌಭಾಗ್ಯದಲ್ಲಿ ಮೂಲ ಪೀಠದಲ್ಲಿ ಜಯಂತ್ಯುತ್ಸವ ಜರುಗುತ್ತಿರುವುದು ತಮಗೆ ಅತ್ಯಂತ ಸಂತೋಷ ಉಂಟು ಮಾಡಿದೆ ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರು ಮಾತನಾಡಿ, ಶ್ರೀ ವೀರಭದ್ರಸ್ವಾಮಿ ವೀರಶೈವ ಸಮುದಾಯಕ್ಕಷ್ಟೇ ಸ್ವಾಮಿಯಲ್ಲ. ಇಡೀ ಮನುಕುಲಕ್ಕೆ ಮಹಾಪುರುಷನಾಗಿ ಶಿವ ಸಂಸ್ಕೃತಿ ಹೆಚ್ಚಿಸಿದ್ದನ್ನು ಮರೆಯುವಂತಿಲ್ಲ. ದುಷ್ಟ ಶಕ್ತಿಗಳು ನಿರ್ನಾಮಗೊಂಡು ಸಾತ್ವಿಕ ಶಕ್ತಿ ಬೆಳೆದು ಬರುವ ಅವಶ್ಯಕತೆಯಿದೆ ಎಂದು ಹೇಳಿದರು.
ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ತೊನಸನಹಳ್ಳಿ ಚರಂತೇಶ್ವರಮಠದ ರೇವಣಸಿದ್ಧ ಶಿವಾಚಾರ್ಯರು, ಪಾಲ್ತೂರು ಚನ್ನವೀರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಬುಕ್ಕಸಾಗರದ ಕರಿಬಸವೇಶ್ವರ ಶಿವಾಚಾರ್ಯರು, ಅಥನೂರು ಅಭಿನವ ಗುರುಬಸವ ಶಿವಾಚಾರ್ಯರು, ಹಣಮಾಪುರದ ಡಾ. ಸೋಮಶೇಖರ ಶಿವಾಚಾರ್ಯರು, ದೊಡ್ಡಗುಣಿ ರೇವಣಸಿದ್ಧ ಶಿವಾಚಾರ್ಯರು, ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯರು, ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಹೊಳೆನರಸೀಪುರದ ಮಲ್ಲಿಕಾರ್ಜುನಸ್ವಾಮಿ, ಕೂಡ್ಲಗೆರೆ ಹಾಲೇಶ, ಮಹೇಶ್ವರಪ್ಪ, ನಾಗರನವಿಲೆ ಸಿದ್ಧೇಶ್ವರ ಶಾಸ್ತ್ರಿಗಳು ಇನ್ನಿತರ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net