ವೇಷ ಧರಿಸಿ ಅಸಹಾಯಕರಿಗೆ ನೆರವು : ಕುಕ್ಕೆಶ್ರೀ ಸರ್ಕಲ್‌ನ ಸೇವೆ : ಸಮಾಜದ ಒಳಿತಿಗೆ ಮಿಡಿವ ಯುವ ಹೃದಯಗಳು

5-neravu
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸರ್ಕಲ್ ಎಂಬ ಯುವ ತಂಡ ಸಮಾಜಮುಖಿ ಸೇವೆಯನ್ನು ನೆರವೇರಿಸುವ ತುಡಿತದಿಂದ ನವರಾತ್ರಿಯ ಸಮಯದಲ್ಲಿ ಶಾರ್ದೂಲ (ಸಿಂಹ) ವೇಷ ಧರಿಸಿ ಅದರಿಂದ ಸಂಗ್ರಹವಾದ ಮೊತ್ತವನ್ನು ಸಂಕಷ್ಟದಲ್ಲಿದ್ದ ಸುಬ್ರಹ್ಮಣ್ಯದ ಸಾಯಿಸುದರ್ಶನ್ ಅವರ ವಿದ್ಯಾಭ್ಯಾಸ ಮತ್ತು ಚಿಕಿತ್ಸೆಗಾಗಿ ಗುರುವಾರ ಹಸ್ತಾಂತರಿಸಿದೆ.

ಸಿಂಹ ವೇಷ ಧಾರಣೆ: ಸುಬ್ರಹ್ಮಣ್ಯ ಕುಕ್ಕೆಶ್ರೀ ಸರ್ಕಲ್ ತಂಡದಲ್ಲಿ 18 ಜನ ಯುವಕರಿದ್ದಾರೆ. ಇದರಲ್ಲಿ ಕೆಲವರು ವಿದ್ಯಾಭ್ಯಾಸದೊಂದಿಗೆ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಉದ್ಯೋಗಿಗಳು, ವ್ಯಾಪಾರಸ್ಥರು ಇದ್ದಾರೆ. ಈ ವರ್ಷ ತಂಡದ ಸದಸ್ಯರು ಶಾರ್ದೂಲ ವೇಷ ಧರಿಸಿ ಸಂಗ್ರಹಿಸಿದ್ದಾರೆ. ನವರಾತ್ರಿಯ ಮೂರು ದಿನ ವೇಷ ಧರಿಸಿ ಸುಬ್ರಹ್ಮಣ್ಯದ ಮನೆ ಮನೆಗೆ ತೆರಳಿದ್ದರು.ಇದರಲ್ಲಿ ಸಂಗ್ರಹವಾದ ಒಟ್ಟು ಮೊತ್ತ 45,020 ರೂ. ಸಂಪೂರ್ಣವಾಗಿ ಸಾಯಿ ಸುದರ್ಶನ್ ಅವರಿಗೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ

ಸಂಗ್ರಹವಾದ ಮೊತ್ತದ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಸುಬ್ರಹ್ಮಣ್ಯದ ಜನತೆಯ ಮುಂದಿರಿಸಿದ್ದಾರೆ. ಪೆಟ್ಟಿಗೆಯಲ್ಲಿ ಸಂಗ್ರಹವಾದ ಮೊತ್ತ 41,505 ರೂ., ಗೂಗಲ್ ಪೇನಲ್ಲಿ ಸಂಗ್ರಹಿತ ಮೊತ್ತ 3,515 ರೂ. ಒಟ್ಟು ಸಂಗ್ರಹಣೆ 45,020 ರೂ. ಎಂಬ ವಿವರವನ್ನು ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ತಂಡದ ಸದಸ್ಯ ಉದಯ ಕುಮಾರ್ ದೋಣಿಮಕ್ಕಿ ಶಾರ್ದೂಲ ವೇಷ, ತಾಸೆ, ಡೋಲು ಇತ್ಯಾದಿಗಳನ್ನು ಉಚಿತವಾಗಿ ನೀಡುತ್ತಾರೆ. ಸದಸ್ಯರಾದ ರಾಜೇಶ್, ವಿಷ್ಣು, ಗಗನ್ ರಾಜ್, ಹಿತೇಶ್ ಮೊದಲಾದವರು ತಾಸೆ ಮತ್ತು ಡೋಲುಗಳನ್ನು ನುಡಿಸುತ್ತಾರೆ. ಉಳಿದ ಸದಸ್ಯರು ವೇಷ ಧರಿಸುತ್ತಾರೆ.

ಸಮಾಜಕ್ಕಾಗಿ ಒಂದಿಷ್ಟು

ಸಮಾಜದ ಒಳಿತಿಗಾಗಿ ತುಡಿಯುವ ಹಂಬಲದ ಕುಕ್ಕೆಶ್ರೀ ಸರ್ಕಲ್ ತಂಡಕ್ಕೆ ನಾಯಕರೆಂಬುದಿಲ್ಲ. ಸುಹಾಸ್ ಎಚ್.ಎಸ್ ತಂಡವನ್ನು ನಿರ್ವಹಿಸುತ್ತಾರೆ. ಉಳಿದಂತೆ ಗಗನ್ ರಾಜ್, ವಿಷ್ಣು, ಭರತೇಶ್, ಯಕ್ಷಿತ್, ಅನಿರುದ್ಧ್ ಹರಿಚಂದನ್, ರಾಜೇಶ್, ಅನ್ವಿತ್, ಜಯಂತ್, ಹಿತೇಶ್, ಚೆನ್ನ, ಉದಯ ಕುಮಾರ್, ಸುಜನ್, ಮುಕೇಶ್, ರಕ್ಷಣ್, ಕಾರ್ತಿಕ್ ಮೊದಲಾವರು ಸಹಾಯಹಸ್ತ ಚಾಚುತ್ತಾರೆ. ಪ್ರಥಮ ವರ್ಷ 41,556 ರೂ. ಕಡಬದ ಗಿರೀಶ್ ಎಂಬುವರಿಗೆ ನೀಡಿದ್ದರು. ಕಳೆದ ವರ್ಷದ 54,150 ರೂ.ಯಲ್ಲಿ ಎರ್ದಡ್ಕದ ಪುಟ್ಟ ಮಕ್ಕಳ ವಿದ್ಯಾಭ್ಯಾಸಕ್ಕೆ 34,150 ರೂ., ಪುರುಷೋತ್ತಮ ಸುಬ್ರಹ್ಮಣ್ಯ ಮತ್ತು ಪ್ರಭಾಕರ ಕುಮಾರಧಾರಾ ಅವರ ಮನೆಯವರಿಗೆ ತಲಾ 10 ಸಾವಿರ ರೂ. ನೀಡಿದ್ದರು.

ನಮ್ಮ ನಡೆ ಸಜ್ಜನ ಸಮಾಜದ ಒಳಿತಿನ ಕಡೆ ಎಂಬ ಧ್ಯೇಯ ಇರಿಸಿಕೊಂಡು ಸ್ನೇಹಿತರು ಸೇರಿಕೊಂಡು ಚಿಕ್ಕ ಸೇವೆ ನಡೆಸುತ್ತಿದ್ದೇವೆ. ನಮ್ಮ ಸೇವೆಗೆ ಸುಬ್ರಹ್ಮಣ್ಯದ ಜನತೆ ಸಹಕಾರ ನೀಡುತ್ತಿದ್ದಾರೆ. ಪಾಲಕರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಮಗೂ ಸಂತಸವಾಗುತ್ತದೆ ಸುಹಾಸ್ ಎಚ್.ಎಸ್, ಕುಕ್ಕೆಶ್ರೀ ಸರ್ಕಲ್ ತಂಡದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net