ಮಾಲಾಧಾರಿಗಳ ಕುಟುಂಬಕ್ಕೆ ಆರ್ಥಿಕ ನೆರವು,  ಶ್ರೀ ದುರ್ಗಾ ಡೆವಲಪರ್ಸ್ ಪ್ರಮೋಟರ್ಸನಿಂದ ಸಹಾಯ

IMG-20250101-WA0021.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲನಲ್ಲಿ ಇತ್ತೀಚೆಗೆ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಎಂಟು ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಕ್ಕೆ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಕಂಪನಿಯ ಎಂಡಿ ವೀರೇಶ ಉಂಡಿ ಅವರು ಬುಧವಾರ ಸಂಜೆ ಮಾಲಾಧಾರಿಗಳ ಪ್ರತಿ ಕುಟುಂಬಕ್ಕೆ 25 ಸಾವಿರ ರೂ. ನೆರವು ನೀಡಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

10 ದಿನಗಳ ಹಿಂದೆ ಉಣಕಲ್ ಅಚ್ಚವ್ವನ ಕಾಲನಿಯಲ್ಲಿ ರಾತ್ರಿ ವೇಳೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿದ್ದ ಕೊಠಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಾಲಕ ಸೇರಿದಂತೆ ಒಟ್ಟು 9 ಜನರು ತೀವ್ರ ಸುಟ್ಟು ಗಾಯಗೊಂಡು ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಎಂಟು ಜನರು ಇದರಲ್ಲಿ ಸಾವಿಗೀಡಾಗಿದ್ದರು.

ಅವರ ಕುಟುಂಬದ ಸದಸ್ಯರಿಗೆ ಹಣಕಾಸಿನ ನೆರವು ನೀಡುವ ಮೂಲಕ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ ಎಂಡಿ ವೀರೇಶ ಉಂಡಿ ಅವರು ಮಾನವೀಯ ಕಳಕಳಿ ಮೆರೆದಿದ್ದಾರೆ.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಯುವ ಮುಖಂಡ ರಜತ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ಆರೀಫ್ ಭದ್ರಾಪೂರ, ಹಿರಿಯ ಮುಖಂಡ ಕಲ್ಲಪ್ಪ ವಾಲಿಕಾರ, ಸುನೀಲ ಮಠಪತಿ ಇತರರು ಮೃತರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳಿದರು.

ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಪ್ರಕರಣದಲ್ಲಿ ಎಂಟು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿ. ಮಾಲಾಧಾರಿಗಳ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತಾವು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ವಿರೇಶ ಉಂಡಿ ಅವರು ಮಾತನಾಡಿ, 2024ರ ಡಿಸೆಂಬರ್ ಅಂತ್ಯದಲ್ಲಿ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವುದು ಅತಿ ದೊಡ್ಡ ದುರಂತವಾಗಿದೆ. ಸಂತ್ರಸ್ತ ಕುಟುಂಬದ ಸದಸ್ಯರು ಬಡವರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಧನವನ್ನು ಹೆಚ್ಚಿಸಲು ಕಾಂಗ್ರೆಸ್ ಮುಖಂಡರೊಂದಿಗೆ ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net