ಸಂಕಷ್ಟದಲ್ಲೂ ರೈತರ ಕೈಬಿಡದ ಹೈನುಗಾರಿಕೆ

nandini-milk
Published on

ಈಶ್ವರಮಂಗಲ: ದ.ಕ ಜಿಲ್ಲೆಯ ನಂದಿನಿ ಹಾಲು ರಾಜ್ಯದಲ್ಲೇ ಹೆಸರು ಪಡೆದುಕೊಂಡಿದೆ. ಸಂಘದ ಸದಸ್ಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿರುವುದರಿಂದ ಈ ಹೆಸರು ಪಡೆಯಲು ಸಾಧ್ಯವಾಗಿದೆ. ಕೋವಿಡ್ ಸಂಕಷ್ಟದಲ್ಲೂ ಹೈನುಗಾರಿಕೆ ರೈತರ ಕೈಹಿಡಿದಿದ್ದು, ರೈತರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ದ.ಕ ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್ ಹೇಳಿದರು.

ಕೆಯ್ಯೂರು ಬೊಳಿಕ್ಕಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಮಂಗಳವಾರ ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳೆಜ್ಜ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ ಮಾತನಾಡಿದರು. ಕಾರ್ಯದರ್ಶಿ ಬಿ.ಚಂದ್ರಹಾಸ ರೈ ವರದಿ ಮಂಡಿಸಿದರು.

ಬಹುಮಾನ ವಿತರಣೆ: ಸಂಘಕ್ಕೆ ಅತೀ ಹೆಚ್ಚು ಹಾಲು ನೀಡುತ್ತಿರುವ ಸದಸ್ಯರನ್ನು ಗೌರವಿಸಲಾಯಿತು. ಸತತ 14ನೇ ವರ್ಷವೂ ಮಾಡಾವು ಜ್ಯೋತಿನಿಲಯದ ರಾಮಣ್ಣ ಗೌಡ ಪ್ರಥಮ ಬಹುಮಾನ ಪಡೆದುಕೊಂಡರು. ಬಾಬು ಕಣಿಯಾರು ದ್ವಿತೀಯ ಮತ್ತು ವಿಜಯ ಐತ್ತಪ್ಪ ನಾಯ್ಕ ತೃತೀಯ ಬಹುಮಾನ ಪಡೆದರು.

ಉಪಾಧ್ಯಕ್ಷೆ ದೇವಿಕಾ ಎ.ಎಸ್, ನಿರ್ದೇಶಕರಾದ ಪದ್ಮನಾಭ ರೈ ಡಿ, ಪಿ.ಜನಾರ್ದನ ಗೌಡ, ಕೆ.ಗುಡ್ಡಪ್ಪ ರೈ ಕೋರಿಕ್ಕಾರು, ಪ್ರವೀಣ ಕೆ, ಮಹಾಲಿಂಗ ಪಾಟಾಳಿ, ಈಶ್ವರಿ ಜೆ.ಶೆಟ್ಟಿ, ಪಿ.ವಿಶ್ವನಾಥ ನಾಯ್ಕ, ಪದ್ಮನಾಭ ಪಿ ಉಪಸ್ಥಿತರಿದ್ದರು. ಸಿಬ್ಬಂದಿ ಪದ್ಮಯ್ಯ ಹಿಂದಿನ ಸಭೆಯ ನಡವಳಿಕೆ ಓದಿದರು. ಭಾಸ್ಕರ ರೈ ವಂದಿಸಿದರು.

---------------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net