

ಹುಬ್ಬಳ್ಳಿ: ದೀಪಾವಳಿ ಹಬ್ಬದ ನಿಮಿತ್ತ ಇಲ್ಲಿಯ ರೋಟರಿ ಸರಸ್ವತಿ ವಿದ್ಯಾಲಯದ ಇಂಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಆಫ್ ಮಿಡ್‌ಟೌನ್ ವತಿಯಿಂದ ಗಬ್ಬೂರಿನಲ್ಲಿರುವ ಶ್ರೀ ಸಿದ್ಧಿವಿನಾಯಕ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ಇತ್ತೀಚೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪರಿಸರ ಸ್ನೇಹಿ ಪಟಾಕಿ, ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಎಲ್ಲರಿಗೂ ಆರತಿ ಮಾಡಲಾಯಿತು.
ಪ್ರಾಚಾರ್ಯೆ ಕೀರ್ತಿ ದೇಶಪಾಂಡೆ ಸ್ವೀಟ್ ಬಾಕ್ಸ್ ವಿತರಿಸಿ ಮಾತನಾಡಿ, ಪವಿತ್ರ ಕಾರ್ಯ ಮಾಡುತ್ತಿರುವವರಿಗೆ ನೆರವಿನ ಹಸ್ತ ಚಾಚಬೇಕು. ತಂದೆ-ತಾಯಿಯಿಂದ ಬಂದ ಆಸ್ತಿ, ವೇತನ ಮತ್ತು ಪಿಂಚಣಿಯಿಂದ ಅನಾಥಾಶ್ರಮ ನಡೆಸುತ್ತಿರುವ ವಿನಾಯಕ ಅವರ ಸೇವೆ ಶ್ಲಾಘನೀಯ. ವಯಸ್ಸಾದ ಕಾಲದಲ್ಲಿ ತಂದೆ-ತಾಯಿಯನ್ನು ಯಾರೂ ಮನೆಯಿಂದ ಹೊರಗಡೆ ಹಾಕಬಾರದು ಎಂದು ವಿನಂತಿಸಿದರು.
ರೋಟರಿ ಕ್ಲಬ್ ಆಫ್ ಮಿಡ್‌ಟೌನ್ ಅಧ್ಯಕ್ಷ ಗುಲ್ಜಾರ್ ಅಹ್ಮದ್ ಅವರು ಅನಾಥಾಶ್ರಮ ನಡೆಸುತ್ತಿರುವ ವಿನಾಯಕ ಅವರಿಗೆ ನಗದು ನೀಡಿ ಶಾಲು ಹಾಕಿ ಸನ್ಮಾನಿಸಿದರು.
ಏಕ್ ಮುಟ್ಟಿ ಚಾವಲ್ ಯೋಜನೆಯಡಿ ಸಂಗ್ರಹವಾದ ದವಸವನ್ನ ನೀಡಲಾಯಿತು.
ಶಾಲೆ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರವೀಣ ಬನ್ಸಾಲಿ, ಕೌಸ್ತುಭ ಸಂಶೀಕರ, ಕೀರ್ತಿ ಠಕ್ಕರ, ನಿಗಮ ಸಾಂಘವಿ, ಸುಶೀಲ ಲದ್ವಾ ಇತರರು ಇದ್ದರು.