

ಮೈಸೂರು: ಜನಸಂಖ್ಯೆಯಲ್ಲಿ ಅತಿ ಸಣ್ಣ ಸಮಾಜವಾದ ನಾಮಧಾರಿಗೌಡ ಜನಾಂಗದವರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಮುಂದೆ ಸಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರದಾಸ್ ಹೇಳಿದರು.
ನಗರದ ಗಂಗೋತ್ರಿ ಬಡಾವಣೆಯ ಬಾಲಕರ ವಿದ್ಯಾರ್ಥಿ ನಿಲಯದ ನಾಮಧಾರಿಗೌಡ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಾಧಕರಿಗೆ ಅಭಿನಂದನೆ ಹಾಗೂ ಸಂತೋಷ ಕೂಟ’ ಸಮಾರಂಭದಲ್ಲಿ ಮಾತನಾಡಿದರು.
ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿರುವ ಸಮಾಜದ ಜನರು ಮಕ್ಕಳ ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಉನ್ನತ ಹುದ್ದೆಯಲ್ಲಿರುವವರು ಸಮುದಾಯಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಪಿ.ಚನ್ನರೇವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ನಗರ ವಲಯದ ಅಧ್ಯಕ್ಷ ಎಂ.ಎನ್.ಸೋಮಶೇಖರ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಸಿ.ಜಿ.ನಾಗರಾಜು, ಕೈಗಾರಿಕೋದ್ಯಮಿ ಕೆ.ಎನ್.ನರಸಿಂಹಮೂರ್ತಿ, ಎಚ್.ರಾಜಣ್ಣ ಮಾತನಾಡಿದರು.
ಸಮುದಾಯದ ಸಾಧಕರಿಗೆ ಸನ್ಮಾನ: ವಿಜ್ಞಾನಿ ಡಾ.ಎನ್.ಬಿ.ರಾಮಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಲ್.ಹರ್ಷಿತಾ, ಪಿಎಚ್.ಡಿ ಪದವೀಧರರಾದ ಡಾ.ಕೆ.ಆರ್.ರಾಘವೇಂದ್ರ, ಡಾ.ಸಿ.ಎಸ್.ಹರ್ಷವರ್ಧನ್, ಡಾ.ವೈ.ಎನ್.ರಮ್ಯಾ, ಸಹಾಯಕ ಪ್ರಾಧ್ಯಾಪಕಿ ಕೃತಿಕಾ ಆಲನಹಳ್ಳಿ, ಸಮಾಜ ಸೇವಕ ಭಾಸ್ಕರ್, ಭಾರತೀಯ ಸೇನೆಯ ಮೇಜರ್ ಡಾ.ಎಚ್.ಎಸ್.ಆಶಿತ್, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಬಿ.ಎನ್.ಉಷಾ, ಕೆ.ಎಸ್.ಶಿಲ್ಪಾ, ಸಾಹಿತಿ ಹೊ.ರಾ.ಪರಮೇಶ್, ರಕ್ತದಾನಿ ಬಿ.ಎಸ್.ಮಹೇಶ್, ಕೆ.ವೈ.ವೆಂಕಟೇಶ್, ಚಿರಾಗ್ ಎಚ್.ಗೌಡ, ಆರ್.ಧನ್ಯಾ, ಯುವ ಲೇಖಕಿ ಸಿಂಚನಾ ಮತ್ತಿತರರನ್ನು ಅಭಿನಂದಿಸಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರುವ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಸಂಘ ಹೊರತಂದಿರುವ 2024ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಸಂಘದ ಅಭಿವೃದ್ಧಿಗೆ ನೆರವಾದ ದಾನಿಗಳನ್ನು ಗೌರವಿಸಲಾಯಿತು.
ಯುವ ಮುಖಂಡರಾದ ಪ್ರದ್ಯುಮ್ನ ಆಲನಹಳ್ಳಿ, ಎಂ.ಸುಬ್ರಹ್ಮಣ್ಯ, ಜಗನ್ನಾಥ್, ಎಚ್.ಕೆ.ಪ್ರಸನ್ನ, ಎಂ.ರಾಜಶೇಖರ್, ಎಂ.ಎನ್.ಜಯಕುಮಾರ್, ಜ್ಞಾನಾನಂದ, ಡಾ.ಎಚ್.ಆರ್. ಪ್ರಕಾಶ್, ಸಂಘದ ಕಾನೂನು ಸಲಹೆಗಾರ ಎಂ.ಎಸ್.ಜಿನಚಂದ್ರನ್, ಬಿ.ಎನ್.ಹೇಮಲತಾ ಇತರರು ಇದ್ದರು.