ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ನೆರವಾಗಲಿ

Photographer
Published on

ಹೊನ್ನಾವರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಬದುಕು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸರ್ಕಾರವು ಛಾಯಾಗ್ರಹಣ ವಿಭಾಗಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ನೆರವಾಗಬೇಕು ಎಂದು ಸೇಫ್ ಸ್ಟಾರ್ ಸಮೂಹ ಸಂಸ್ಥೆ ಅಧ್ಯಕ್ಷ ಜಿ.ಜಿ. ಶಂಕರ ಹೇಳಿದರು.

ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಮಂಗಳವಾರ ಆಯೋಜಿಸಿದ್ದ 17ನೇ ವಾರ್ಷಿಕೊತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಗ್ರಾಹಕ ತೆಗೆದ ಉತ್ತಮ ಚಿತ್ರ ಮುಂದಿನ ತಲೆಮಾರಿಗೆ ಒಂದು ದಾಖಲೆಯಾಗುವುದು. ಸೇಫ್ ಸ್ಟಾರ್ ಸಂಸ್ಥೆಯ ವತಿಯಿಂದ ಜಿಲ್ಲೆಯ ಛಾಯಾಗ್ರಾಹಕರಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದರು.

ಯಧುವೀರ ಕೊ-ಆಪರೇಟಿವ್ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿ, ಹೊನ್ನಾವರ ತಾಲೂಕು ಪ್ರವಾಸೋದ್ಯಮ ರಂಗದಲ್ಲಿ ಬೆಳೆಯಲು ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ದೊರೆಯುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿದರೆ, ಈ ಭಾಗದ ಫೋಟೋಗ್ರಾಫರ್ ವೃತ್ತಿಯವರಿಗೆ ಆದಾಯ ಬರಲಿದೆ. ಅಂತಹ ಕಾರ್ಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ ಎಂದರು.

ಹಿರಿಯ ಛಾಯಾಗ್ರಾಹಕರಾದ ಷಣ್ಮುಖ ಭಟ್, ಗಣೇಶ ಶೆಟ್ಟಿ, ಸುಭಾಶ ನಾಯ್ಕ, ವಿಠ್ಠಲ್ ಭಂಡಾರಿ, ರಮೇಶ ಮೇಸ್ತ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ವಿಭಾಗದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಸುರೇಶ ಹೊನ್ನಾವರ ವಹಿಸಿದ್ದರು. ಪತ್ರಕರ್ತ ಸಂಘದ ಅಧ್ಯಕ್ಷ ಸತೀಶ ತಾಂಡೇಲ್, ಕೆಪಿಎ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಸತೀಶ ನಾಯ್ಕ, ರಾಘವ ಮೇಸ್ತ ಇತರರು ಉಪಸ್ಥಿತರಿದ್ದರು. ಲಕ್ಷ್ಮೀಶ ಭಂಡಾರಿ ಸ್ವಾಗತಿಸಿದರು. ಎನ್.ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜು ನಾಯ್ಕ ವರದಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net