ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ: ಸಿಇಒ ಕೆ.ಎಂ.ಗಾಯತ್ರಿ ಮನವಿ

1
Published on

ಮೈಸೂರು: ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯದ ಬಗ್ಗೆ ಇರಲಿ ಗಮನ ಟಿ ಬಿ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು 100 ದಿನಗಳ ಕಾಲ ಕ್ಷಯ ರೋಗ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಿಕ್ಷಯ ಪೋರ್ಟಲ್ನಲ್ಲಿ ಕ್ಷಯ ರೋಗಿಗಳನ್ನು ದತ್ತು ಪಡೆದು ಅವರ ಔಷಧದ ವೆಚ್ಚ ಭರಿಸಬೇಕು. ಯಾರು ಬೇಕಾದರೂ ದತ್ತು ಪಡೆಯಲು ಅವಕಾಶವಿದೆ ಎಂದು ಹೇಳಿದರು.

ಮೊದಲು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಬೇಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿರುವುದರಿಂದ ಇದಕ್ಕೆ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ನೀಡಿ ಹರಡದಂತೆ ನೋಡಿಕೊಳ್ಳ್ಳಬೇಕು. ಮೂರು ನಾಲ್ಕು ವಾರಗಳಿಗೂ ಹೆಚ್ಚು ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು ಆದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳ್ಳಬೇಕು ಎಂದರು.

ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಪತ್ತೆ ಹಚ್ಚಿದವರಿಗೆ 500 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಗ್ರಾಮಿಣ ಪದೇಶದಲ್ಲಿ ಹೆಚ್ಚಿನ ಪರೀಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹೆಚ್ಚಿನ ರೀತಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಕ್ಷಯ ರೋಗಕ್ಕೆ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸಹ ಎಚ್ಚರಿಕೆ ವಹಿಸಿ ನಿಮ್ಮ ಆರೋಗ್ಯದತ್ತಲೂ ಗಮನ ನೀಡಬೇಕು. ಕ್ಷಯದಿಂದ ಯಾರಿಗೂ ತೊಂದರೆ ಅಗದಂತೆ ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ಒಟ್ಟು 100 ದಿನಗಳ ಕಾಲ ಕ್ಷಯ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2005-06 ರಿಂದ ಆರ್‌ಎಂಪಿಟಿಸಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಟಿಬಿಯನ್ನು ಕಡಿಮೆ ಮಾಡುವುದಾಗಿದೆ ಎಂದು ಹೇಳಿದರು.

ಮುಂದಿನ 100 ದಿನಗಳ ಕಾಲ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಟಿ ಬಿ ಯನ್ನು ಕಡಿಮೆ ಮಾಡಲು ಗ್ರಾಮಗಳಿಗೆ ಭೇಟಿ ನೀಡಿ ಸರ್ವೇ ಮಾಡಲಾಗುವುದು. ಯಾವ ಗ್ರಾಮಗಳಲ್ಲಿ ಯಾವ ಏರಿಯಾಗಳಲ್ಲಿ ಕ್ಷಯ ರೋಗ ಇದೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಸಕ್ಕರೆ ಕಾಯಿಲೆ, ಏಡ್ಸ್‌ಗೆ ಚಿಕಿತ್ಸೆ ಪಡೆಯುತ್ತಿರುವವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಹೆಚ್ಚಾಗಿ ಕ್ಷಯ ರೋಗ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಇಂತವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಜಿಲ್ಲೆಯಲ್ಲಿ 204 ಹಾಡಿಗಳನ್ನು ಗುರುತಿಸಿದ್ದು, ಇಲ್ಲಿ ಹೆಚ್ಚಿನ ಗಮನ ಹರಿಸಿ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, ಪ್ರಪಂಚದಲ್ಲಿ ಹೆಚ್ಚು ನರಳಿಸುವ ಹಾಗೂ ಮಾರಣಾಂತಿಕ ಕಾಯಿಲೆಯಲ್ಲಿ ಪ್ರಥಮ ಸ್ಥಾನ ಕ್ಷಯ ರೋಗ ಆಗಿದೆ. ಒಬ್ಬ ರೋಗಿ ತನ್ನ ಸುತ್ತ ಮುತ್ತ ಇರುವ 40 ಜನರಿಗೆ ಇದನ್ನು ಹರಡಿಸುವ ಸಾಧ್ಯತೆ ಇರುತ್ತದೆ. ಇದನ್ನು ಸಂಪೂರ್ಣ ಹೋಗಲಾಡಿಸಲು 8 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು. ಆದರೆ ಕೆಲವರು ಸ್ವಲ್ಪ ದಿನ ತೆಗೆದುಕೊಂಡು ನಿಲ್ಲಿಸುತ್ತಾರೆ. ಇದರಿಂದ ಕೆಲವು ದಿನಗಳ ಕಾಲ ವಾಸಿ ಆದ ಹಾಗೆ ಇದ್ದು ನಂತರ ಮತ್ತೆ ಬರುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳಾದ ಡಾ.ಎಂ.ಎಸ್. ಜಯಂತ್, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಬೃಂದಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net