ಸೊಳ್ಳೆಮುಕ್ತವಾಗಿಸಲು ಸಹಕರಿಸಿ

nrp mosuu
ಎನ್.ಆರ್.ಪುರ ತಾಲ್ಲೂಕು ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ವಿನಯ್ ಮಾಹಿತಿಯನ್ನು ನೀಡಿದರು. ವೈ.ಎಂ.ಲಲಿತಾ, ಪಿ.ಪಿ.ಬೇಬಿ, ಡೈಸಿ, ಪೂರ್ಣಾವತಿ, ಆಶಾ,ಮಮತಾ ಇದ್ದರು.
Published on

ಎನ್.ಆರ್.ಪುರ: ಸೊಳ್ಳೆಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಹೇಳಿದರು.

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವರ್ಷ ಆ.20ರಂದು ವಿಶ್ವ ಸೊಳ್ಳೆ ದಿನ ಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಮತ್ತು ಸೊಳ್ಳೆ ನಿಯಂತ್ರಣದ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮಲೇರಿಯಾ ಉಂಟು ಮಾಡುವ ಪರಾವಲಂಬಿ ಜೀವಿಗಳು ಸೊಳ್ಳೆಯ ಹೊಟ್ಟೆಯಲ್ಲಿರುತ್ತವೆ. ಸೊಳ್ಳೆಗಳಿಂದ ಮಲೇರಿಯಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು 1897 ಆ.20 ರಂದು ಸರ್ ರೊನಾಲ್ಡ್ ರಾಸ್ ಕಂಡುಹಿಡಿದ ನೆನಪಿಗಾಗಿ ವಿಶ್ವ ಸೊಳ್ಳೆ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಟ್ಟಿನಮನೆ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಮಾತನಾಡಿ, ಸೊಳ್ಳೆಗಳಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಪ್ರಭೇದಗಳಿವೆ. ಮಲೆನಾಡಿನಲ್ಲಿ ಅನಾಫಿಲಿಸ್ ಈಡೀಸ್ ಮತ್ತು ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಪ್ರಮುಖವಾಗಿ ಕಂಡುಬರುತ್ತಿವೆ. ಸೊಳ್ಳೆಗಳು ನಿಂತ ನೀರಲ್ಲಿ ಉತ್ಪತ್ತಿಯಾಗುವುದರಿಂದ ಎಲ್ಲೂ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ಆಶಾ ಮೇಲ್ವಿಚಾರಕಿ ಪೂರ್ಣಾವತಿ, ಆಶಾ, ಮಮತಾ , ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net