

ಆನೇಕಲ್: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಹೆನ್ನಾಗರ ಗ್ರಾಮ ಪಂಚಾಯಿತಿಯು ಕೈಗಾರಿಕಾ ಪ್ರದೇಶಗಳಿಗೆ ಹೊಂದಿಕೊಂಡಿರುವುದರಿಂದ ವಿವಿಧ ರಾಜ್ಯಗಳ ಜನರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್ ಹೇಳಿದರು.
ಹೆನ್ನಾಗರ ಗ್ರಾಪಂ, ಹೆಬ್ಬಗೋಡಿ ಆರಕ ಠಾಣೆ ವತಿಯಿಂದ ಕಾಚನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ಸಾರ್ವಜನಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆನ್ನಾಗರ, ಯಾರಂಡಳ್ಳಿ, ಕಾಚನಾಯಕನಹಳ್ಳಿ ಮತ್ತು ಎಚ್.ಹೊಸಹಳ್ಳಿ ಗ್ರಾಮಗಳು ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿದ್ದು, ಈ ಗ್ರಾಮಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಾನೂನಿನ ಅರಿವು ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಅಪರಾಧಗಳು, ದ್ವಿಚಕ್ರ ವಾಹನಗಳ ಕಳವು, ಮನೆಗಳಲ್ಲಿ ಕಳವು, ಅಪಘಾತಗಳು ಹೆಚ್ಚಾಗಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯು ಸಾರ್ವಜನಿಕ ಅರಿವು ಕಾರ್ಯಕ್ರಮ ರೂಪಿಸಿದೆ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಉಪಯುಕ್ತವಾಗಿದೆ. ಹೆಚ್ಚಿನ ಜನದಟ್ಟಣೆ ಇರುವುದರಿಂದ ಪೊಲೀಸ್ ಬೀಟ್ ಹೆಚ್ಚು ಮಾಡಬೇಕು ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರೊಂದಿಗೆ ನಿಖರ ಸಂಪರ್ಕವನ್ನು ಹೊಂದುವುದರಿಂದ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ. | ವಿನಯ್ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ