ಸಹಾಯವೇ ಸಂಘಟನೆಯ ಮೂಲಮಂತ್ರ

22gkn2-a- RAGHAVESHWAR
Published on

ಗೋಕರ್ಣ: ಜನರು ತಮ್ಮ ಕಷ್ಟ ಕಾರ್ಪಣ್ಯವನ್ನು ನಿವೇದಿಸಿಕೊಳ್ಳುವ ಮುನ್ನವೇ ನಾವೇ ಅವುಗಳಿಗೆ ಸ್ಪಂದಿಸುವಂತಾಗಬೇಕು. ಬಡ ವಿದ್ಯಾರ್ಥಿಗಳಿಗೆ, ಅಸಹಾಯಕ ರೋಗಿಗಳಿಗೆ, ಸಂಕಷ್ಟದಲ್ಲಿರುವವರಿಗೆ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಹಾಯಹಸ್ತ ನೀಡುವಂತಾಗಬೇಕು. ಅದುವೇ ಶ್ರೀಮಠದ ಸಂಘಟನೆಯ ಮೂಲಮಂತ್ರ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಿಸಿದರು.

ಮಂಗಳವಾರ ನಡೆದ ಸಾಗರ ಮಂಡಲದ ಕ್ಯಾಸನೂರು, ಉಳವಿ, ಕೆಳದಿ ವಲಯಗಳ ಗುರುಭಿಕ್ಷಾ ಸೇವೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ಇಂದು ಸೇವೆಗೆ ವಿಪುಲ ಅವಕಾಶಗಳಿವೆ. ವಿಶೇಷವಾಗಿ ಯುವಕರು ಸೇವಾಕಾರ್ಯಗಳಿಗೆ ಮುಂದೆ ಬಂದು ಆ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸುವಂತಾಗಬೇಕು. ಭವ್ಯ ಭಾರತದ ಭವಿಷ್ಯದ ಕುಡಿಗಳು ಸಮಗ್ರ ವ್ಯಕ್ತಿತ್ವ ಬೆಳೆಸಿಕೊಂಡು ರೂಪಗೊಳ್ಳಲು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಅಪೂರ್ವ ಶಿಕ್ಷಣ ಯೋಜನೆಯನ್ನು ಶ್ರೀಮಠ ಆಯೋಜಿಸಿದೆ. ದೇಶವನ್ನು ಬೆಳಗಿಸಬಲ್ಲ ಈ ಶೈಕ್ಷಣಿಕ ಅಭಿಯಾನವನ್ನು ಸಮಾಜದ ಎಲ್ಲೆಡೆ ಪ್ರಚುರಪಡಿಸಿ ಸಮಗ್ರ ಮಾಹಿತಿಗಳನ್ನು ತಲುಪಿಸುವ ಕಾರ್ಯವಾಗಬೇಕು ಎಂದು ಸ್ವಾಮೀಜಿ ಹೇಳಿದರು. ಸಭೆಯಲ್ಲಿ ಗಣನೀಯ ಸಮಾಜ ಸೇವೆಸಲ್ಲಿಸಿದ ಉಳವಿ ವಲಯದ ಎಂ.ವಿ. ರಾಮರಾವ್, ಎಚ್.ಎನ್. ಕೇಶವ, ಕೆ.ಆರ್. ಸುಬ್ರಾಯ ಭಟ್ಟ, ಸೀತಾರಾಮಯ್ಯ, ಕೆಳದಿ ಪಶ್ಚಿಮ ವಲಯದ ಉಮೇಶ ಭಟ್ಟ ಬಿ.ಆರ್., ಬಿ.ಟಿ. ಸೋಮನ್, ಬಿ.ಆರ್. ದೇವಪ್ಪ, ಕೆಳದಿ ಪೂರ್ವ ವಲಯದ ಎಂ.ಎಂ. ಕೃಷ್ಣಮೂರ್ತಿ, ಕೆ.ಸಿ. ಸದಾನಂದ, ಆರ್. ರಘುನಾಥ ಭಟ್ಟ, ಮಂಜಪ್ಪ ಹೊಸಮನೆ, ಕ್ಯಾಸನೂರು ವಲಯದ ಬಿ.ಪಿ.ಎನ್. ವೆಂಕಟರಮಣ ಹೆಗಡೆ (ಮರಣೋತ್ತರ), ರಾಜಾರಾಂ ರಾವ್ ಹೊಸಬಾಳೆ, ಕೆ.ವಿ. ಲಕ್ಷ್ಮೀನಾರಾಯಣ ಸ್ವಾಮಿ, ಕೆ.ಎನ್. ಜಾಹ್ನವಿ ಮತ್ತು ಬಿ.ಎಂ. ಜಯರಾಂ ಅವರಿಗೆ ಶ್ರೀ ಗುರುಸೇವಾ ತಿಲಕ ಗೌರವ ನೀಡಿ ಸನ್ಮಾನಿಸಲಾಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಪ್ರಾಂತ ಕಾರ್ಯದರ್ಶಿ ರುಕ್ಮಾವತಿ, ಸಾಗರ ಮಂಡಲಾಧ್ಯಕ್ಷ ಮುರಳಿ ಗೀಜಗಾರ, ಇತರರು ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿ ಮತ್ತು ವಿನಾಯಕ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net