ಸರ್ಕಾರಿ ಶಾಲೆ ಮಕ್ಕಳಿಗೆ ನೆರವಾಗಿ

Ambedkar Nagra school 1
ಹೊಳೆನರಸೀಪುರ ಪಟ್ಟಣದ ಎಂಎಂಎಕೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ ದಾನಿ ಸುಪ್ರೀತ್ ಅವರು ಉಚಿತವಾಗಿ ಬ್ಯಾಗ್‌ಗಳನ್ನು ವಿತರಿಸಿದರು. ಬಿಇಒ ಸೋಮಲಿಂಗೇಗೌಡ, ಮುಖ್ಯಶಿಕ್ಷಕ ಮಹೇಶಪ್ಪ, ಶಿಕ್ಷಕಿ ಪುಷ್ಪಲತಾ ಮತ್ತಿತರರಿದ್ದರು.
Published on

ಹೊಳೆನರಸೀಪುರ: ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದರಿಂದ ಅವರ ಶಿಕ್ಷಣ ಮಟ್ಟ ಹೆಚ್ಚಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ ಎಂಎಂಎಕೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗೆ ಶ್ರೀಮಂತರ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುವುದಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬದ ಮಕ್ಕಳೇ ಹೆಚ್ಚಾಗಿ ದಾಖಲಾಗುತ್ತಾರೆ. ಇಂತಹ ಮಕ್ಕಳು ವಿದ್ಯಾಭ್ಯಾಸದ ಹಂತದಲ್ಲಿ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುವುದಿಲ್ಲ. ವಿದ್ಯಾಭ್ಯಾಸಕ್ಕೆ ಪೂರಕವಾದ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಅಂತಹ ಮಕ್ಕಳಿಗೆ ಸಾರ್ವಜನಿಕರು ಉಚಿತವಾಗಿ ಬ್ಯಾಗು, ನೋಟ್ ಪುಸ್ತಕ ಹಾಗೂ ಇತರ ಸಾಮಗ್ರಿಗಳನ್ನು ಒದಗಿಸುವುದರಿಂದ ಪುಣ್ಯ ಬರುತ್ತದೆ ಎಂದರು.

ದಾನ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಹಣವಿದ್ದರೂ ಆ ಪುಣ್ಯ ಪಡೆಯುವ ಅದೃಷ್ಟವೂ ಹಲವರಿಗೆ ದಕ್ಕುವುದಿಲ್ಲ. ದಾನ ಮಾಡುವ ಮನಸ್ಸಿದ್ದರೆ ಅಧಿಕ ಹಣವೇ ಇರಬೇಕಾಗಿಲ್ಲ. ಅವರಿಗಿಷ್ಟ ಬಂದಷ್ಟು ಆರ್ಥಿಕ ನೆರವು ನೀಡಿದರೂ ಅದು ಉತ್ತಮವೇ ಎಂದರು.
ಸಾರ್ವಜನಿಕರು ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸಬೇಕಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸಹಕರಿಸುವ ಮನೋಭಾವ ಬೆಳೆಸಿಕೊಂಡರೆ ಶಾಲೆಗಳು ಉತ್ತಮವಾಗಿರುತ್ತವೆ ಎಂದು ಹೇಳಿದರು.

ಸುಪ್ರೀತ್ ಎಂಬುವರು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ್ದ ಬ್ಯಾಗ್‌ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಹೇಶಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net