

ಉಳ್ಳಾಲ: ಮಾನವೀಯ ಸೆಲೆ ಮನದಿಂದ ಬರಬೇಕೇ ಹೊರತು, ಭಾಷಣದಿಂದ ಬರುವುದಿಲ್ಲ. ಹಿಂದು ಮುಸ್ಲಿಂ ಸುಮಾರು 25 ವರ್ಷಗಳ ಸ್ನೇಹ ಜಾತಿ, ಧರ್ಮವನ್ನು ಮೀರಿ ಹಿಂದು ಹುಡುಗಿಯ ಮದುವೆಯನ್ನು ಮುಸ್ಲಿಂ ಕುಟುಂಬ ಮಾಡಿ ಸಂಭ್ರಮಿಸಿ ಹೊಸ ಜೀವನ ಕಲ್ಪಿಸುವುದು ಉಳ್ಳಾಲದ ವೈಶಿಷ್ಟೃವಾಗಿದೆ. ಇಂತಹ ಮಹತ್ಕಾರ್ಯ ಮಾಡಿದವರನ್ನು ಗುರುತಿಸುವುದು ಮುಖ್ಯ ಎಂದು ಉದ್ಯಮಿ ವಿದ್ಯಾಧರ್ ಶೆಟ್ಟಿ ಅಭಿಪ್ರಾಯಪಟ್ಟರು.
ಆರ್ಥಿಕವಾಗಿ ಹಿಂದುಳಿದ ಹಿಂದು ಯುವತಿಯ ಮದುವೆ ನೆರವೇರಿಸಿದ ಅಲೇಕಳದ ಮುಸ್ಲಿಂ ಕುಟುಂಬಕ್ಕೆ ಭಾನುವಾರ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ಮಂಚಿಲದಲ್ಲಿ ಅಭಿನಂದಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಮಾತನಾಡಿ, ಈ ಮಾನವೀಯ ಕಾರ್ಯ ಉಳ್ಳಾಲದ ಇತಿಹಾಸದಲ್ಲಿ ಉಳಿಯಬೇಕಿದ್ದು, ಸಂಘಟನೆ ಪುಸ್ತಕ ಹೊರತರಲು ಯೋಚಿಸಿದೆ. ವಿಜಯವಾಣಿ ಪತ್ರಿಕೆ ಮೊದಲಾಗಿ ವರದಿ ಪ್ರಕಟಿಸಿ ಜನತೆಯ ಮುಂದೆ ತಂದಿರುವುದು ಶ್ಲಾಘನೀಯ ಎಂದರು.
ಎಂ.ಕೆ. ಗ್ರೂಪಿನ ಸದಸ್ಯರಾದ ಎಂ.ಕೆ.ಅಬ್ದುಲ್ ರಝಾಕ್ ಹಾಗೂ ಅಬ್ದುಲ್ ರಹ್ಮಾನ್‌ಅವರನ್ನು ಸನ್ಮಾನಿಸಲಾಯಿತು. ಗ್ರೂಪಿನ ಅಧ್ಯಕ್ಷ ಎಂ.ಕೆ.ಹಂಜ ಉಪಾಧ್ಯಕ್ಷ ಕರೀಂ ಬೈತಾರ್, ಕಾರ್ಯದರ್ಶಿ ರಿಯಾಜ್, ಉಳ್ಳಾಲ ನಗರಸಭೆ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ, ಸದಸ್ಯರಾದ ವೀಣಾ ಡಿಸೋಜ, ಭಾರತಿ, ಸಮಾಜ ಸೇವಕ ಫಾರೂಕ್ ಮಂಚಿಲ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಉಪಾಧ್ಯಕ್ಷ ವಿಷ್ಣುಮೂರ್ತಿ ಭಟ್, ಕಾರ್ಯದರ್ಶಿ ನಜೀರ್ ಬಾರ್ಲಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಕೆ.ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.