ಬರಗಾಲದಲ್ಲಿ ಜನರಿಗೆ ಕಾಂಗ್ರೆಸ್‌ನಿಂದ ನೆರವು

16-kglphoto-4
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಚ್.ಸಿ.ಮಹದೇವಪ್ಪ ಮಾತನಾಡಿದರು. ಎ.ಆರ್.ಕೃಷ್ಣಮೂರ್ತಿ, ಶಿವಣ್ಣ, ಜಿ.ಎನ್.ನಂಜುಂಡಸ್ವಾಮಿ, ಯೋಗೇಶ್, ಬಿ.ತೋಟೇಶ್ ಇದ್ದರು.
Published on

ಕೊಳ್ಳೇಗಾಲ: ಬಿಜೆಪಿಯವರು ಯುದ್ಧವನ್ನೂ ಮಾಡುವುದಿಲ್ಲ, ನಿದ್ದೆ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.

ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ 10 ವರ್ಷದಲ್ಲಿ ಜನಪರವಾದ, ರೈತರ ಪರವಾದ ಕೆಲಸ ಮಾಡಿಲ್ಲ. ಆದರೆ, ಕಾಂಗ್ರೆಸ್ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಬರಗಾಲದಲ್ಲಿ ಜನರಿಗೆ ನೆರವಾಗಿದೆ. ಬಿಜೆಪಿಯವರು ಕೆಲಸ ಮಾಡುವುದಿಲ್ಲ, ಮಾಡುವವರನ್ನೂ ಬಿಡುವುದಿಲ್ಲ ಎಂದರು.

ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಬೆಳೆಗೆ ದುಪಟ್ಟು ಬೆಲೆ ಸಿಗುವಂತೆ ಮಾಡಲಾಗುವುದು ಎಂದು ಬಿಜೆಪಿ ಹೇಳಿತ್ತು. ಆದರೆ ಇದ್ಯಾವುದೂ ಈಡೇರಿಲ್ಲ. ಸತ್ಯ ಹೇಳಬೇಕಾದ ಪ್ರಧಾನಿ ಮೋದಿ ಸುಳ್ಳು ಹೇಳಿದ್ದಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ನೀರು, ಮೇವಿಗೆ ಬರವಿದ್ದರೂ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರುದ್ಯೋಗ ಶೇ.4 ರಷ್ಟಿತ್ತು, ಬಿಜೆಪಿ ಅಧಿಕಾರಕ್ಕೆ ಬಂದಾಗ ಶೇ.8 ರಷ್ಟಾಗಿದೆ. ಬಿಜೆಪಿ ಸುಲಿಗೆ ಮೇಲೆ ಸುಲಿಗೆ ಮಾಡಿ ಈಗ 400 ಸೀಟ್ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 10 ವರ್ಷವಾಗಿದ್ದು, ರೈತರು, ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮ ಜಾರಿ ಮಾಡಿಲ್ಲ. ಬದಲಾಗಿ ಕೈಗಾರಿಕೋದ್ಯಮಿಗಳ ಪರವಾಗಿದ್ದಾರೆ ಎಂದರು.

ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಪಂ ಮಾಜಿ ಸದಸ್ಯ ಯೋಗೇಶ್, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್, ಮುಖಂಡ ಓಲೆ ಮಹದೇವ, ಬಿ.ರಾಚಯ್ಯ, ನಿವೃತ್ತ ತಹಸೀಲ್ದಾರ್ ಮಹದೇವಯ್ಯ, ಅಣಗಳ್ಳಿ ಬಸವರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net