

ಮಂಡ್ಯ: ಅಂಗವಿಕಲ ಮಕ್ಕಳಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೆ ಪ್ರೋತ್ಸಾಹ, ನೆರವು ನೀಡುವುದು ಅತ್ಯಾವಶ್ಯಕ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಕ್ಯಾತುಂಗೆರೆ ಬಡಾವಣೆ ಸಮೀಪದ ವಿಕಸನ ಜೋಗುಳ ಮತ್ತು ದತ್ತು ಕೇಂದ್ರದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಅನಾಥ ಮಕ್ಕಳಿಗೆ ನೆರವು ಮತ್ತು ಬೆಚ್ಚನೆಯ ಉಡುಪು-ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲಯನ್ಸ್ ಸಂಸ್ಥೆಗಳ ಮುಖ್ಯಧ್ಯೇಯವೇ ಸೇವೆ ಮತ್ತು ಸ್ನೇಹವಾಗಿದೆ. ಇದರಲ್ಲಿ ಅನಾಥಾಶ್ರಮ, ಆರೋಗ್ಯ ನೆರವು, ಕ್ಯಾನ್ಸರ್ ತಡೆಗಟ್ಟಲು ಅಭಿಯಾನ ಇವು ಮುಖ್ಯಧ್ಯೇಯವಾಗಿವೆ, ಅನಾಥಾಶ್ರಮದ ಮಕ್ಕಳು ಮತ್ತು ವಯೋವೃದ್ಧರ ಪೋಷಣೆ ದೊಡ್ಡ ಸವಾಲಿನ ಕಾರ್ಯ ಎಂದು ನುಡಿದರು.
ವಿಶೇಷಚೇತನ ಮತ್ತು ಅನಾಥಾಶ್ರಮದ ಮಕ್ಕಳಿಗೆ ಸರಿಯಾದ ಶಿಕ್ಷಣ, ಆತ್ಮಸ್ಥೈರ್ಯ, ನೆರವು, ಪ್ರೋತ್ಸಾಹ ಲಭ್ಯವಾದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಕಸನದಂತಹ ನೂರಾರು ಸಂಸ್ಥೆಗಳಿಗೆ ಸಂಘ ಸಂಸ್ಥೆಗಳು ನೆರವು, ಅನುದಾನ, ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಸರ್ಕಾರ ಸೇವಾವಲಯದಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳ ಮೂಲಕ ಸೇವೆಗಳು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತವೆ, ಇದರೊಟ್ಟಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಸಮಾಜದಲ್ಲಿ ಉನ್ನತಸ್ಥಾನ ಮಾನದಲ್ಲಿರುವವರು, ಶ್ರೀಮಂತರು, ಸೇವಾ ಮನೋಭಾವ ಉಳ್ಳವರು ತಮ್ಮ ಶುಭಕಾರ್ಯ, ಹುಟ್ಟುಹಬ್ಬ, ಹಿರಿಯರ ಸ್ಮರಣೆ ಕಾರ್ಯಕ್ರಮಗಳ ದಿನಗಳಲ್ಲಿ ತಮ್ಮ ಕೈಲಾದ ನೆರವು, ಅನ್ನದಾನ, ಪ್ರೋತ್ಸಾಹ ನೀಡಿ ಸಮಾಜಮುಖಿಯಾಗಿ ನಿಲ್ಲುವುದು ಉತ್ತಮ ಎಂದು ಸಲಹೆ ನೀಡಿದರು.
ಅಲಯನ್ಸ್ ಸಂಸ್ಥೆ 2ನೇ ಉಪ ಪ್ರಾಂತಪಾಲ ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ಕುಮಾರ್, ಸದಸ್ಯ ಪ್ರೀತಂ, ಕಾರ್ಯದರ್ಶಿ ಮೋಹನ್‌ಕುಮಾರ್, ನಗರಸಭಾ ಸದಸ್ಯ ಕುಮಾರ್, ಮಲ್ಲೇಶ್, ರವಿ, ರಂಜಿತ್, ಧನಂಜಯ್ ಮತ್ತಿತರರಿದ್ದರು.