

ರಾಯಚೂರು: ಮುಂಬರುವ ಲೋಕಸಭೆ ಚುನಾವಣೆಯನ್ನು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಸಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ರಾಜಕೀಯ ಪಕ್ಷಗಳು ನಿಯಮಾನುಸಾರ ನಡೆಯಬೇಕು ಎಂದರು.
ಜಿಲ್ಲೆ ರಾಜ್ಯದ ಗಡಿ ಭಾಗದಲ್ಲಿರುವುದರಿಂದ ಕಾನೂನು ಬಾಹಿರ ಚಟುವಟಿಕೆ ಹಾಗೂ ಸಂಶಯಾತ್ಮಕ ವಸ್ತುಗಳು ಸಾಗಾಣಿಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಆರಂಭಿಸಿ ಭದ್ರತೆ ಒದಗಿಸಲಾಗುವುದು.
ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು 90 ಲಕ್ಷ ರೂ.ವರೆಗೆ ಖರ್ಚು ಮಾಡಬಹುದಾಗಿದೆ ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿರಸ್ತೇದಾರ್ ರಿಷಿಕೇಶ, ವಿಷಯ ನಿರ್ವಾಹಕರಾದ ರಮೇಶ, ಪ್ರಭು, ರಾಜಕೀಯ ಪಕ್ಷಗಳ ಮುಖಂಡರಾದ ತಿರುಮಲರೆಡ್ಡಿ, ಶಂಕರ, ರವಿಕುಮಾರ, ಆಂಜಿನಯ್ಯ, ಮಕ್ಬುಲ್ ಪಾಷಾ ಉಪಸ್ಥಿತರಿದ್ದರು.