

ವಿಜಯಪುರ : ನಗರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಹಾಗೂ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಗೃಹ ಸಮರ್ಪಕ ನಿರ್ವಹಣೆಗೆ ಮತ್ತಷ್ಟು ಆದ್ಯತೆ ನೀಡಿ ಕ್ರಮವಹಿಸಲಾಗುತ್ತಿದೆ. ನಿಲ್ದಾಣಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರಯಾಣಿಕರು ಕೂಡ ಕೈಜೋಡಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮನವಿ ಮಾಡಿದ್ದಾರೆ.
ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಗೃಹ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆಮಾಡಿ ಪರವಾನಗಿ ನೀಡಲಾಗಿದೆ. ಪರವಾನಿಗೆದಾರರು ನಿತ್ಯವೂ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ವಾಟ್ಸ್-ಅಪ್ ಗ್ರೂಪ್ ಮೂಲಕ ತಿಳಿದುಕೊಳ್ಳಲಾಗುತ್ತಿದ್ದು, ಪ್ರತಿ ದಿನ 3 ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತು ಜಿಪಿಎಸ್ ಆಧಾರಿತ ಫೋಟೊ ಅಪಲೋಡ್ ಮಾಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ನಾರಾಯಣಪ್ಪ ಕುರುಬರ ಮಾಹಿತಿ ನೀಡಿದ್ದಾರೆ.
ಸಂಸ್ಥೆ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕ ಸಿಬ್ಬಂದಿ ಪ್ರತಿದಿನ ಅಪ್‌ಲೋಡ್ ಮಾಡಿದ ಫೋಟೊ ಪರಿಶೀಲಿಸಿ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಕ್ರಮ ವಹಿಸಲಾಗುತ್ತಿದೆ. ನಿಲ್ದಾಣದ ಸ್ವಚ್ಛತೆಯ ಕುರಿತು ನ್ಯೂನ್ಯತೆಗಳು ಕಂಡು ಬಂದರೆ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡುವುದರ ಜತೆಗೆ ದಂಡ ವಿಧಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡುವ ದಿಸೆಯಲ್ಲಿ ಪ್ರಯಾಣಿಕರು ಸಹ ಕೈಜೋಡಿಸಬೇಕು. ತ್ಯಾಜ್ಯಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಬೀಸಾಕದೆ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ವಿಲೇವಾರಿಗಾಗಿರುವ ಡಸ್ಟ್‌ಬಿನ್ ಬಳಸಬೇಕು. ಬಸ್ ನಿಲ್ದಾಣವನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ನಮ್ಮ ಕಾರ್ಯಕ್ಕೆ ಪ್ರಯಾಣಿಕರು ಕೈಜೋಡಿಸಬೇಕು ಎಂದು ನಾರಾಯಣಪ್ಪ ಕುರುಬರ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.