ಪರರನ್ನು ದೂಷಿಸದೆ ಕೈಲಾದ ಸಹಾಯ ಮಾಡಿ

2
ಕೈವಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಜಯರಾಂ, ರಘುನಂದನ ಭಟ್, ರಂಜನ್, ರಾಮಕೃಷ್ಣ ಶ್ರೌತಿ, ವಿಜಯ್ ಭರ್ತೂರು, ಅಶ್ವತ್ಥನಾರಾಯಣ ಇದ್ದರು.
Published on

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಸಲಹೆ- ಸಾಧಕರಿಗೆ ಅಭಾಸಾಪ ಪುರಸ್ಕಾರ ಪ್ರದಾನ

ಚಿಂತಾಮಣಿ: ಬೇರೆಯವರನ್ನು ದೂಷಿಸುವ ಬದಲು ಕೈಲಾದ ಸಹಾಯ ಮಾಡಬೇಕು. ಭಾಷಣಗಳಲ್ಲಿ ವಿಚಾರವನ್ನು ತಿಳಿಸುವವರು ಸಾಕಷ್ಟಿದ್ದಾರೆ, ಧರ್ಮಾಚರಣೆ ಮಾಡುವ ಮಾದರಿ ವ್ಯಕ್ತಿಗಳ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಕೈವಾರದ ಧರ್ಮದರ್ಶಿ ಡಾ.ಎಂ.ಆರ್.ಜಯರಾಮ್ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಭಾಷೆ ಸಂಸ್ಕೃತದಿಂದ ಆರಂಭವಾಗಿ ಸಾವಿರಾರು ಭಾಷೆಗಳು ಬೆಳೆದವು. ಸಾಮಾನ್ಯ ಜನರಿಗೆ ವಿಚಾರಗಳು ತಿಳಿಯಬೇಕು ಎಂಬ ಕಾರಣಕ್ಕಾಗಿ ಮಾತೃಭಾಷೆಗಳು ಹೆಚ್ಚು ಪ್ರಾಮುಖ್ಯತೆ ಪಡೆದವು ಎಂದರು.

ಬೇರೆಯವರು ಕೆಲಸ ಮಾಡುತ್ತಿಲ್ಲ ಎಂದು ದೂಷಿಸುವುದನ್ನು ಬಿಟ್ಟು ಕೈಲಾದ ಸಹಾಯ ಕಾರ್ಯ ಮಾಡಬೇಕು. ಉತ್ತಮ ವಿಚಾರಗಳು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ಕಳೆದ 20-25 ವರ್ಷದಿಂದ ಐದು ಸಾವಿರ ಭಜನಾ ತಂಡಗಳನ್ನು ನಡೆಸುತ್ತಿರುವುದು ಸಾರ್ಥಕತೆ ಮೂಡಿಸಿದೆ ಎಂದರು.

ಆದಿಕವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ವೇ.ಮೂ. ವಿಷ್ಣು ಭಟ್ ಡೋಂಗ್ರೆ, ಸಾಹಿತ್ಯವು ಸಮಾಜದ ಪ್ರತಿಬಿಂಬ. ರಾಮಾಯಣ ಓದಿದರೆ ಆಗಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸನ್ನಿವೇಶ ತಿಳಿಯಬಹುದು. ಸನಾತನ ಧರ್ಮವು ಅಳಿವಿನ ಅಂಚಿನಲ್ಲಿದ್ದಾಗ ಗೋಸ್ವಾಮಿ ತುಳಸಿದಾಸರು ರಾಮಚರಿತಮಾನಸ ರಚಿಸಿ ಜನರಲ್ಲಿ ಧಾರ್ಮಿಕ ಮನೋಭಾವ ಮೂಡಿಸಿದರು. ತತ್ಕಾಲೀನ ಸಾಮಾಜಿಕ ಸನ್ನಿವೇಶ ಇಲ್ಲದಿದ್ದರೆ ಅದು ಉಪಯೋಗಕ್ಕೆ ಬಾರದು ಎಂದರು.

ವಾಗ್ದೇವಿ ಪುರಸ್ಕಾರ ಸ್ವೀಕರಿಸಿದ ಡಾ.ಜಿ.ಬಿ.ಹರೀಶ ಮಾತನಾಡಿ, ಕಾರ್ಯ ಮಾಡುವುದು ನಮ್ಮ ಕರ್ಮ ಎಂದು ಜೀವಿಸಿದವರು ಬಹಳಷ್ಟು ಜನರಿದ್ದಾರೆ. ಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು, ತಮಗಿಂತ ದೊಡ್ಡವರಿದ್ದಾರೆ ಎಂದು ತಿಳಿದಿರುತ್ತಾರೆ. ಆದರೆ ಮಹಿಷಾಸುರನ ಹಬ್ಬ ಆಚರಿಸುವ ಚಿಂತಕರು ಈ ಮಾತನ್ನು ಹೇಳುವುದಿಲ್ಲ. ಜ್ಞಾನವಂತಿಕೆ ಜತೆಗೆ ಹೃದಯವಂತಿಕೆಯೂ ಬೇಕು. ಆಕಾಶಕ್ಕೆ ಏಣಿ ಹಾಕುವ ಮನುಷ್ಯನು ಇನ್ನೊಬ್ಬ ಮನುಷ್ಯನ ಹೃದಯವನ್ನು ಅರಿಯುವುದರಲ್ಲಿ ಹಿಂದೆ ಬಿದ್ದಿದ್ದಾನೆ. ಅಧ್ಯಾತ್ಮಿಕ ಶಕ್ತಿ ಇಲ್ಲದೆ ಬರೆದ ಸಾಹಿತ್ಯವು ಅವರ ಶವದೊಂದಿಗೇ ಸ್ಮಶಾನಕ್ಕೆ ಹೋಗುತ್ತದೆ. ಅಧ್ಯಾತ್ಮ ಇರುವ ಸಾಹಿತ್ಯವು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಕಾರ್ಯಕ್ರಮದ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮಾತನಾಡಿದರು.

ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ರಂಜನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಖಜಾಂಚಿ ರಾಮಕೃಷ್ಣ ಶ್ರೌತಿ, ಸಹ ಖಜಾಂಚಿ ವಿಜಯ್ ಭರ್ತೂರು, ತುಮಕೂರು ವಿಭಾಗ ಸಂಯೋಜಕ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

ಸಾಹಿತ್ಯಕ್ಕೂ ಅಧ್ಯಾತ್ಮ ಅಗತ್ಯ

ಆಕಾಶವಾಣಿ ನಿವೃತ್ತ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ಸಾಹಿತ್ಯಕ್ಕೂ ಅಧ್ಯಾತ್ಮ, ಶ್ರದ್ಧೆ ಅಗತ್ಯ. ಸಮಾಜದಲ್ಲಿ ಏನನ್ನು ಕಳೆದುಕೊಂಡರೂ ಬದುಕಬಹುದು. ಆದರೆ ಶ್ರದ್ಧೆ ಕಳೆದುಕೊಂಡರೆ ಉಳಿಯಲಾಗದು. ಜ್ಞಾನ ಧಾನ್ಯದ ರೀತಿ. ಅದು ಶಾಶ್ವತವಾಗಿ ಉಳಿಯಬೇಕೆಂದರೆ ಮತ್ತೆಮತ್ತೆ ಬಿತ್ತಿ ಬೆಳೆಯಬೇಕು. ಶ್ರದ್ಧಾವಂತರೇ ಕೋಟ್ಯಂತರ ಇರುವ ದೇಶದಲ್ಲಿ ನಾಸ್ತಿಕರಿಗೆ ಬುದ್ಧಿಯನ್ನು ಆಳಲು ಬಿಟ್ಟುಕೊಟ್ಟಿರುವುದು ದುರಂತ. ಇದನ್ನು ನಾವೆಲ್ಲರೂ ಶ್ರದ್ಧೆಯಿಂದ ಎದುರಿಸಬೇಕು. ಶ್ರದ್ಧಾವಂತರು ಎರಡನೇ ದರ್ಜೆ ನಾಗರಿಕರಲ್ಲ. ಭಜನೆ, ಮಂತ್ರಗಳು, ಅಜ್ಜಿಯ ಕತೆಗಳು, ಜಾನಪದ ಗೀತೆಗಳು ಇಂದಿಗೂ ಪ್ರಸ್ತುತ ಎಂದರು.

ಪುರಸ್ಕಾರ

ಸಾಮಾಜಿಕ ಕಾಳಜಿ ಮತ್ತು ರಾಷ್ಟ್ರೀಯ ದೃಷ್ಟಿಕೋನಧ ಯುವ ಸಾಹಿತಿ ಪುರಸ್ಕಾರವನ್ನು ಲೇಖಕ ಡಾ.ಜಿ.ಬಿ.ಹರೀಶ ಅವರಿಗೆ, ಸಾಮಾಜಿಕ ಕಾಳಜಿ ಮತ್ತು ರಾಷ್ಟ್ರೀಯ ದೃಷ್ಟಿಕೋನದ ಹಿರಿಯ ಸಾಹಿತಿ ಪುರಸ್ಕಾರವನ್ನು ವೇ.ಮೂ.ವಿಷ್ಣು ಭಟ್ ಡೋಂಗ್ರೆ ಅವರಿಗೆ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net