ಹೆಲ್ಮೆಟ್ ಇಲ್ಲದೆ ಹೊರ ಬರಬೇಡಿ

26 hulsur 01
Published on

ಹುಲಸೂರು: ದ್ವಿಚಕ್ರ ವಾಹನ ಸವಾರರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಅವಶ್ಯ ಎಂದು ಬಸವಕಲ್ಯಾಣ ಸಿಪಿಐ ಅಲಿಸಾಬ್ ಹೇಳಿದರು.

ಪಟ್ಟಣದ ಮುಖ್ಯ ರಸ್ತೆ ಬದಿ ಶನಿವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ಬೀಟ್ ಮಟ್ಟದ ರಸ್ತೆ ಸುರಕ್ಷತಾ ಅಭಿಯಾನ, ದ್ವಿಚಕ್ರ ವಾಹನ ಸವಾರರೊಂದಿಗೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರು ಜಾಗೃತರಾಗಬೇಕು. ಪ್ರಾಣ ರಕ್ಷಣೆ ನಮ್ಮ ಕೈಯಲ್ಲಿಯೇ ಇದೆ ಎಂದರು.

ಹೆಲ್ಮೆಟ್ ಇದ್ದರೆ ಪ್ರಾಣಕ್ಕೆ ಅಪಾಯ ಇರುವುದಿಲ್ಲ. ಸಂಕೋಚ ಪಡದೆ ಹೆಲ್ಮೆಟ್ ಬಳಸಬೇಕು. ಮದ್ಯಪಾನ ಮಾಡಿ ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಿಸಬಾರದು ಎಂದರು. ಭಾಲ್ಕಿ-ಬಸವಕಲ್ಯಾಣ ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತ, ಲಕ್ಷಿ ಚೌಕ್, ಶಿವಾಜಿ ಚೌಕ್ ಹಾಗೂ ಬಸವೇಶ್ವರ ವೃತ್ತದ ಮೂಲಕ ಹೆಲ್ಮೆಟ್ ಧರಿಸಿ ನೂರಾರು ದ್ವಿಚಕ್ರ ವಾಹನ ಸವಾರರೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.
ಪಿಎಸ್‌ಐ ನಾಗೇಂದ್ರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಾಂತ ಕನ್ನಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net