ಹೆಲ್ಮೆಟ್ ಕಾರ್ಯಾಚರಣೆಗೆ ರಸ್ತೆಗಿಳಿದ ಎಸ್ಪಿ

18HSN4
Published on

ಹಾಸನ: ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಅಖಾಡಕ್ಕಿಳಿದಿದ್ದು ಮಂಗಳವಾರ ರಾತ್ರಿ ಕೇವಲ ಎರಡು ಗಂಟೆಯಲ್ಲಿ 656 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಚಾರ ಪೊಲೀಸರ ಕಾರ್ಯಾಚರಣೆಯ ನಡುವೆಯೂ ಹೆಲ್ಮೆಟ್ ಜಾಗೃತಿ ಮೂಡದಿರುವುದನ್ನು ಅರಿತ ಎಸ್ಪಿ ಆರ್. ಶ್ರೀನಿವಾಸ್‌ಗೌಡ ಅವರೇ ರಾತ್ರಿ ಬೀಟ್ ಬರುತ್ತಿದ್ದಾರೆ. ಪ್ರತಿ ದಿನ ರಾತ್ರಿ 9ರಿಂದ 11ರ ವರೆಗೆ ಸಿಬ್ಬಂದಿ ಜತೆಗೆ ಮುಖ್ಯರಸ್ತೆಯಲ್ಲಿ ಬೈಕ್ ಸವಾರರ ಅಡ್ಡಗಟ್ಟುತ್ತಿರುವ ಅವರು, ಸ್ಥಳದಲ್ಲೇ ದಂಡ ವಿಧಿಸಿ ಚಾಲಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲೇ ಕುಡಿದು ವಾಹನ ಚಲಾಯಿಸುವ ಹಾಗೂ ಹೆಲ್ಮೆಟ್ ಧರಿಸದ ಬೈಕ್ ಸವಾರರ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ನಗರದ ಎಂಜಿ ರಸ್ತೆ, ರಿಂಗ್ ರಸ್ತೆ, ಸಾಲಗಾಮೆ, ಸಂತೇಪೇಟೆ ಹೀಗೆ ಮುಖ್ಯರಸ್ತೆಗಳಲ್ಲಿ ಗಸ್ತು ತಿರುಗುವ ಮೂಲಕ ಹೆಲ್ಮೆಟ್ ಧರಿಸುವಂತೆ ಬೈಕ್ ಸವಾರರಿಗೆ ಅರಿವು ಮೂಡಿಸುತ್ತಿದ್ದಾರೆ.

ರಾತ್ರಿ ಕಾರ್ಯಾಚರಣೆಯೇ ಹೆಚ್ಚು: ಮೊದಲೆಲ್ಲ ಸಂಜೆ 6 ಗಂಟೆ ಬಳಿಕ ಯಾವ ರಸ್ತೆಯಲ್ಲೂ ಸಂಚಾರ ಪೊಲೀಸರು ಇರುತ್ತಿರಲಿಲ್ಲ. ಹೀಗಾಗಿ ಸಾರ್ವಜನಿಕರು ಹೆಲ್ಮೆಟ್ ಹಾಕುತ್ತಿರಲಿಲ್ಲ. ಆದರೆ ಕಳೆದ ನಾಲ್ಕು ದಿನಗಳಿಂದ ಪೊಲೀಸರ ರಾತ್ರಿ ಕಾರ್ಯಾಚರಣೆ ಹೆಚ್ಚಿದ್ದು ಜನರು ಜಾಗೃತಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net