

ಮಂಡ್ಯ: ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡ ಹಾಕುವ ಬದಲು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶನಿವಾರ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಜಾಗೃತಿ ಮೂಡಿಸುವ ಸಂಬಂಧ ಕೆಲದಿನದ ಹಿಂದೆ ಪೊಲೀಸರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ, ನಿಯಮ ಉಲ್ಲಂಘಿಸಿ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಶಾಸಕ, ಹೆಲ್ಮೆಟ್ ರಹಿತವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುವುದು ತಪ್ಪು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವ ಬದಲು, ಸವಾರರು ಹೆಲ್ಮೆಟ್ ತರುವವರೆಗೂ ಬೈಕ್‌ಗಳನ್ನು ಕೊಡಬಾರದು ಎಂಬ ನಿಯಮ ಜಾರಿಗೆ ತರಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಬರುವವರು ಯಾವುದೇ ಅಪಾಯವಿಲ್ಲದೆ ಮನೆಗೆ ವಾಪಸ್ ಆಗುತ್ತಾರೆಂದು ಮನೆಯವರು ಕಾಯುತ್ತಿರುತ್ತಾರೆ. ಆದರೆ, ಹೆಲ್ಮೆಟ್ ಧರಿಸದೇ ಬಂದರೆ ಅಪಾಯ ಹೆಚ್ಚು. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ತಿಳಿ ಹೇಳಿದರು.
ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಬಂದರೆ ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗುವುದು. ಅನಂತರ ಹೆಲ್ಮೆಟ್ ತಂದ ನಂತರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಾಗುವುದು. ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ ಎಂಬುದಷ್ಟೇ ನಮ್ಮ ಹಾಗೂ ಪೊಲೀಸರ ಆಶಯವಾಗಿದೆ ಎಂದು ಹೇಳಿದರು.
ಡಿವೈಎಸ್ಪಿ ಶಿವಮೂರ್ತಿ, ಸಿಪಿಐಗಳಾದ ಜಾಯ್ ಆಂಥೋನಿ, ನವೀನ್ ಸುಬೇದಾರ್ ಹಾಜರಿದ್ದರು.