ನರಕಯಾತನೆ ಸೃಷ್ಟಿಸಿದ ಮಹಾನಗರಪಾಲಿಕೆ!

18Manju5
ಬೆಳಗಾವಿ ನಗರದ ಹಳೆ ಪಿಬಿ ರಸ್ತೆಯಲ್ಲಿ ಚರಂಡಿಯಲ್ಲಿ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರ ತೆಗೆಯುತ್ತಿರುವ ಕಾರ್ಮಿಕರು.
Published on

ಬೆಳಗಾವಿ: ನಗರದಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಧಾರಾಕರ ಮಳೆಯಿಂದ ಒಂದೆಡೆ ಚರಂಡಿಗಳು ಬ್ಲಾಕ್ ಆಗಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು, ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳು, ಮತ್ತೊಂದೆಡೆ ಡೆಂೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಂದಾಗಿ ನರಕಯಾತನೆ ಸೃಷ್ಟಿಯಾಗಿದೆ.

ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷೃದಿಂದಾಗಿ ಜನಸಾಮಾನ್ಯರು ಸಂಕಟಕ್ಕೆ ಸಿಲುಕಬೇಕಾಗಿದೆ. ಪಾಲಿಕೆಯ 58 ವಾರ್ಡ್‌ಗಳಲ್ಲಿ ಮಾರುಕಟ್ಟೆ, ಜನವಸತಿ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳು, ಕಲ್ಲು, ಮಣ್ಣು, ಪ್ಲಾಸ್ಟಿಕ್‌ಗಳಿಂದ ಬ್ಲಾಕ್ ಆಗಿರುವ ಚರಂಡಿಗಳ ದುರಸ್ತಿ ಆರಂಭಗೊಂಡಿಲ್ಲ. ಎಲ್ಲೆಂದರಲ್ಲಿ ಅಂಗಡಿಕಾರರು, ವ್ಯಾಪಾರಿಗಳು ಹಸಿ ತ್ಯಾಜ್ಯ, ಮಾಂಸ ತ್ಯಾಜ್ಯಗಳನ್ನು ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳು ಗಬ್ಬೆದ್ದು ನಾರುತ್ತಿವೆ. ರಸ್ತೆ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಪ್ರಮುಖ ಕಾರಣ ಎನ್ನಲಾಗಿದೆ.
ನಗರದ ಹಳೆ ಪಿಬಿ ರಸ್ತೆಯ ನಾಲಾ ಪ್ಲಾಸ್ಟಿಕ್‌ಗಳಿಂದ ಬಂದ್ ಆಗಿದ್ದು, ರಸ್ತೆ ಮೇಲೆ ಚರಂಡಿ ನೀರು ಹರಿದು ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ನೆಹರು ನಗರ, ಭಾಗ್ಯನಗರ, ಗಾಂಧಿ ನಗರ, ಎಪಿಎಂಸಿ ರಸ್ತೆ, ಕಣಬರ್ಗಿ ರಸ್ತೆ, ಮಾರುಕಟ್ಟೆ ಪ್ರದೇಶ ರಸ್ತೆಗಳು, ವಿವಿಧ ಕಾಲನಿ ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಂದ ಜನರು ನಿತ್ಯ ಸಮಸ್ಯೆ ಎದುರಿಸಬೇಕಾಗಿದೆ.

ಮಳೆಗಾಲ ಆರಂಭಕ್ಕೂ ಮುನ್ನವೇ ರಸ್ತೆಗಳ ದುರಸ್ತಿ, ಚರಂಡಿಗಳ ಸ್ವಚ್ಛತೆ ಮಾಡುವಂತೆ ಹಳೆ ಪಿಬಿ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಶಹಾಪುರ, ವಡಗಾಂವಿ, ಅನಗೋಳ, ಉದ್ಯಮಬಾಗ, ನೆಹರು ನಗರದ ವ್ಯಾಪಾರಿಗಳು, ನಾಗರಿಕರು ಪಾಲಿಕೆ, ದಂಡು ಮಂಡಳಿ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ವಿನಂತಿಸಿದ್ದರು. ಆದರೆ, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಗರ ನಿವಾಸಿಗಳಾದ ರಫೀಕ್ ಮುಲ್ಲಾ, ಶಿವಾಜಿ ಪಾಟೀಲ, ರಮೇಶ ನಾಯಕ ಹಾಗೂ ನ್ಯಾಯವಾದಿಗಳು ದೂರಿದ್ದಾರೆ.

ಚರಂಡಿಗಳಲ್ಲೇ ತ್ಯಾಜ್ಯ ವಿಲೇವಾರಿ!: ಬೆಳಗಾವಿ ನಗರದ ಚರಂಡಿ, ನಾಲಾಗಳು ಪ್ಲಾಸ್ಟಿಕ್ ಬಾಟಲ್, ಟೀ ಕಪ್, ಮದ್ಯದ ಬಾಟಲ್, ಟೆಟ್ರಾ ಪ್ಯಾಕ್, ಮಾಂಸದ ತ್ಯಾಜ್ಯಗಳಿಂದ ತುಂಬಿ ಬ್ಲಾಕ್ ಆಗಿವೆ. ನಗರದಲ್ಲಿನ ಅಂಗಡಿಕಾರು, ರಸ್ತೆ ಬದಿ ವ್ಯಾಪಾರಿಗಳು, ನಾನ್‌ವೆಜ್ ಹೋಟೆಲ್‌ಗಳ ತ್ಯಾಜ್ಯವನ್ನು ಪಾಲಿಕೆ ವಾಹನಕ್ಕೆ ಕೊಡುವ ಬದಲು ಚರಂಡಿಗಳಿಗೆ ಹಾಕುತ್ತಿದ್ದಾರೆ. ಇದರಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿಯುತ್ತಿದೆ. ಪಾಲಿಕೆ ಅಧಿಕಾರಿಗಳು ಅಂಗಡಿಕಾರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಕ್ಷಣೆ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ನಿಗದಿತ ವೇಳೆಗೆ ಸಿಗದ ದಾಖಲಾತಿಗಳು

ವಾರ್ಡ್‌ಗಳ ಅಭಿವೃದ್ಧಿ ಅನುದಾನ ಹಂಚಿಕೆ, ಸಾರ್ವಜನಿಕ ಆಸ್ತಿಗಳ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರ, ಸರ್ಕಾರಿ ಆಸ್ತಿಗಳ ಒತ್ತುವರಿ, ತೆರಿಗೆ ಆದಾಯ ದುರ್ಬಳಕೆ ಸೇರಿ ವಿವಿಧ ವಿಷಯಕ್ಕಾಗಿ ಮಹಾನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ನಡುವಿನ ಕಿತ್ತಾಟದಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ. ಪಾಲಿಕೆಯಲ್ಲಿ ಒಂದು ಕಟ್ಟಡ ಪರವಾನಗಿ, ಜನನ, ಮರಣ ಪ್ರಮಾಣ ಪತ್ರ ಸೇರಿ ಇತರ ದಾಖಲಾತಿಗಳು ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ. ಸಚಿವರು, ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದೊಡ್ಡವರಿಗೆ ಒಂದೇ ದಿನ ಸಿಗುವ ದಾಖಲಾತಿಗಳು ಬಡವರು ತಿಂಗಳುಗಟ್ಟಲೇ ಕಾಯಬೇಕು. ನಗರದಲ್ಲಿರುವ ಖಾಲಿ ನಿವೇಶನಗಳಿಗೆ ತೆರಿಗೆ ಕಟ್ಟಲು ದಾಖಲಾತಿಗಳನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಲು ಭಯವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈಗಾಗಲೇ ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬ್ಲಾಕ್ ಆಗಿರುವ ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಸೂಚನೆ ನೀಡುತ್ತೇನೆ.| ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net