

ಮೈಸೂರು: ಸಿದ್ದರಾಮಯ್ಯ ಅವರು ಬಾದಾಮಿ ಜನ ಹೆಲಿಕಾಪ್ಟರ್ ಗಿಫ್ಟ್ ನೀಡಲು ತೀರ್ಮಾನಿಸಿದ್ದಾರೆ ಎಂದು ಶಾಸಕ ಜಮೀಲ್ ಅಹ್ಮದ್ ಹೇಳಿದರು.
ಶಾಸಕರಾದ ಮೇಲೆ 60 ವರ್ಷದಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸ ಕೇವಲ ಐದು ವರ್ಷದಲ್ಲಿ ಆಗಿದೆ. ಆದ್ದರಿಂದ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂದು ಬಾದಾಮಿ ತಾಲೂಕಿನ ಜನರು ಕೇಳುತ್ತಿದ್ದಾರೆ. ಶಾಸಕರಾದವರು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಆದರೆ ನನಗೆ ಹಾಗೆ ಬರುವುದಕ್ಕೆ ಆಗಲ್ಲವೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಜನರು ಅವರಿಗೆ ಹೆಲಿಕಾಪ್ಟರ್ ಕೊಡಿಸಲು ತೀರ್ಮಾನ ಮಾಡಿದ್ದಾರೆ. 25 ಕೋಟಿ ರೂ. ಆಗಲಿ ಜನರೇ ದುಡ್ಡು ಹಾಕಿ ಹೆಲಿಕಾಪ್ಟರ್ ಕೊಡಿಸಬೇಕು ಅಂದುಕೊಂಡಿದ್ದಾರೆ. ಇದಕ್ಕಾಗಿ ಬಾದಾಮಿ ತಾಲೂಕಿನ ಜನರು ಚಂದಾ ಸಂಗ್ರಹ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಸಿದ್ದರಾಮಯ್ಯ ಅವರಿಗೆ ಒತ್ತಡವಿದೆ. ನಾನು ಸಹ ಚಾಮರಾಜಪೇಟೆಗೆ ಬನ್ನಿ ಅಂತ ಕರೆಯುತ್ತಿದ್ದೇನೆ. ಆದರೆ ಅವರು ಎಲ್ಲಿ ಸ್ಪರ್ಧೆ ಮಾಡಬೇಕೆಂದು ಇನ್ನೂ ಸಿದ್ಧತೆ ನಡೆಸಿಲ್ಲ. ಬಾದಾಮಿಯಲ್ಲಿ ನಾನೂ ಪ್ರವಾಸ ಮಾಡಿ ಜನರ ಜತೆ ಮಾತನಾಡಿದ್ದೇನೆ. ಅಲ್ಲಿ ದಾರಿಯುದ್ದಕ್ಕೂ ಜನರು ಸಿದ್ದರಾಮಯ್ಯ ಅವರೇ ಬರಬೇಕು ಅನ್ನುತ್ತಿದ್ದಾರೆ ಎಂದರು.
24 ಬೆಂಬಲಿಗರಿಗೆ ಟಿಕೆಟ್ ಕೇಳಿದ್ದೇನೆ:
ವಿಧಾನಸಭಾ ಚುನಾವಣೆಯಲ್ಲಿ ನನ್ನ 24 ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ನಾನು ಕೂಡ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ. ನನ್ನ ಆಪ್ತರು ಟಿಕೆಟ್ ಕೊಡಿಸುವಂತೆ ನನಗೂ ಮನವಿ ಮಾಡುತ್ತಿದ್ದಾರೆ. ಈ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳಲು ನಿರ್ಧಾರಕ್ಕೆ ಬದ್ಧ ಎಂದು ಜಮೀರ್ ಅಹಮ್ಮದ್ ಹೇಳಿದರು.