ಕಾಯಂ ವೈದ್ಯರಿಲ್ಲದೆ ರೋಗಿಗಳ ಪರದಾಟ

narasipura arogya kenra
Published on

ದಾಬಸ್‌ಪೇಟೆ: ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯಸೇವೆಗೆ ಅಲಭ್ಯವಾಗಿವೆ. ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ಸಿಗಬೇಕೆಂಬ ಕಾರಣಕ್ಕೆ ಸ್ಥಾಪಿತವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಾಮಕೆವಾಸ್ತೆ ಎಂಬಂತಾಗಿದೆ. ಇದರಿಂದ ಗ್ರಾಮೀಣ ಜನರು ವೈದ್ಯಕೀಯ ಸೇವೆಗಾಗಿ ದೂರದ ಊರುಗಳಿಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ದಾಬಸ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ನರಸೀಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಲೆಕ್ಯಾತನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಮೂರು ಮಂದಿ ಕಾಯಂ ವೈದ್ಯರಿದ್ದರು. ಮರುಭೂಮಿಯಲ್ಲಿ ನೀರು ಸಿಕ್ಕಂತೆ ಇರುವ ವೈದ್ಯರಿಂದಲೇ ಗ್ರಾಮೀಣ ಜನರು ಹೇಗೋ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದೆರಡು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಾಯಂ ವೈದ್ಯರು ಗೈರಾಗಿದ್ದು ಇದುವರೆಗೆ ವೈದ್ಯರ ದರ್ಶನವೇ ಇಲ್ಲದಂತಾಗಿದೆ. ಇದರಿಂದ ಈ ಭಾಗದ ಹಲವು ಗ್ರಾಮದ ಸಾವಿರಾರು ರೈತಾಪಿ ಜನರು ಸಣ್ಣಪುಟ್ಟ ಕಾಯಿಲೆಗಳಿಗೂ ದೂರದ ಊರುಗಳಿಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ.

ಕೈಗಾರಿಕಾ ವಲಯದಲ್ಲೇ ದುಸ್ಥಿತಿ: ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರವಿರು ಸೋಂಪುರ ದೊಡ್ಡಮಟ್ಟದ ಕೈಗಾರಿಕಾ ವಲಯವಾಗಿದ್ದು, ರಾಷ್ಟಿಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಈ ಭಾಗದಲ್ಲಿ ಹಾದುಹೋಗುತ್ತದೆ. ಇದು ಪ್ರಮುಖವಾಗಿ ಅಪಘಾತವಲಯವಾಗಿ ಗುರುತಿಸಿಕೊಂಡಿದ್ದು ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಾಥಮಿಕ ಚಿಕಿತ್ಸೆಯೂ ಸಿಗದಂತಾಗಿದ್ದು ಹಲವರು ಪ್ರಾಣಬಿಡುವ ಪರಿಸ್ಥಿತಿ ಎದುರಾಗಿದೆ. ಅನಿವಾರ್ಯವಾಗಿ ದಾಬಸ್ ಪೇಟೆಯಲ್ಲಿರುವ ಖಾಸಗಿ ಆಸ್ಪತ್ರೆ, ನೆಲಮಂಗಲ ಹಾಗೂ ತುಮಕೂರಿನ ಜಿಲ್ಲಾ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದು ಆರ್ಥಿಕವಾಗಿ ದುಭಾರಿಯಾಗುವುದರ ಜತೆಗೆ ಪ್ರಾಣಕ್ಕೂ ಕಂಟಕವಾಗಿ ಪರಿಣಮಿಸಿದೆ.

ನರಸೀಪುರಕ್ಕೂ ಇದೇ ಸ್ಥಿತಿ: ರಾಜ್ಯ ಹೆದ್ದಾರಿ 3 ಹಾದುಹೋಗಿರುವ ನರಸೀಪುರಕ್ಕೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಅನೇಕ ಕ್ರಷರ್‌ಗಳೂ ಕಾರ್ಯನಿರ್ವಹಿಸುತ್ತವೆ. ಜತೆಗೆ ಅರಣ್ಯಪ್ರಾಪ್ತಿಯಲ್ಲಿರುವ ಗಡಿಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು ತುರ್ತು ಪರಿಸ್ಥಿತಿಯಲ್ಲಿ ಪ್ರಾಥಮಿಕ ಚಿಕಿತ್ಸೆ ದೊರಕಿಸಿಕೊಡುವುದು ಕಷ್ಟಸಾಧ್ಯವಾಗಿದೆ.

ನೆಲಮಂಗಲ ತಾಲೂಕಿನಲ್ಲಿ ಗಡಿ ಗ್ರಾಮವಾಗಿರುವ ಎಲೆಕ್ಯಾತನಹಳ್ಳಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ಜನರು ಪರದಾಡುವಂತಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಗೂ ಚಿಕಿತ್ಸೆಗಾಗಿ ದೂರದೂರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹಾವು ಕಚ್ಚುವುದು, ಕಾಡುಪ್ರಾಣಿಗಳ ಹಾವಳಿ ಮತ್ತಿತರ ವಿಷಯಗಳಿಗೆ ಸಂಬಂಧಪಟ್ಟಂತೆ ವೈದ್ಯಕೀಯ ಸೇವೆ ಸಿಗುತ್ತಿಲ್ಲ.

ನಾಗಭೂಷಣ್, ಹೆಗ್ಗುಂದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net