ನಿಮಿಷಾಂಬಾ ಡ್ಯಾನ್ಸ್ ಪ್ರಮೋಟರ್‌ನಿಂದ ಜನವರಿ 28ಕ್ಕೆ ‘ಹೆಜ್ಜೆ-ಗೆಜ್ಜೆ’ ಸಂಭ್ರಮ

Published on

ಮೈಸೂರು: ನಿಮಿಷಾಂಬಾ ಡ್ಯಾನ್ಸ್ ಪ್ರಮೋಟರ್‌ನ 26ನೇ ವಾರ್ಷಿಕೋತ್ಸವ ಅಂಗವಾಗಿ ಜ.28ರಂದು ‘ಹೆಜ್ಜೆ-ಗೆಜ್ಜೆ’ ಸಂಭ್ರಮ ಆಯೋಜಿಸಲಾಗಿದೆ.
ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಮೃತ ಮಹೋತ್ಸವ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ ಎಂದು ನಿಮಿಷಾಂಬಾ ಡ್ಯಾನ್ಸ್ ಪ್ರಮೋಟರ್‌ನ ಮುಖ್ಯಸ್ಥ ಶ್ರೀಧರ್ ಜೈನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ, ವಿದ್ವಾನ್ ಸುಧೀರ್, ವಿದುಷಿ ಮಾನಸಿ ಸುಧೀರ್, ಕಲಾವಿದ ಸಂಜಯ್ ಶಾಂತರಾಂ, ನಟ ದಿಲೀಪ್‌ರಾಜ್, ವಿದ್ಯಾರಾಜ್ ಅವರಿಗೆ ಹೆಜ್ಜೆ-ಗೆಜ್ಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುಮಾರು 350 ಕಲಾವಿದರು ದೇವ-ದೇವಿ ವೈಭವ ನೃತ್ಯೋತ್ಸವವನ್ನು ಪ್ರದರ್ಶಿಸಲಿದ್ದಾರೆ. ಬಹುತೇಕ ಪ್ರಮುಖ ದೇವರು ಅಲ್ಲದೇ, ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಸಂಗವನ್ನು ಪ್ರೇಕ್ಷಕರ ಮುಂದಿಡಲಾಗುವುದು. ಜತೆಗೆ ರಾಜಸ್ಥಾನಿ ನೃತ್ಯ, ಕಲಾವಿದ ಸಂಜಯ್ ಮತ್ತು ತಂಡದಿಂದಲೂ ನೃತ್ಯ ಪ್ರದರ್ಶನ ಇರಲಿವೆ ಎಂದು ಹೇಳಿದರು.
ಸಂಸ್ಥೆಯ ಸೌಮ್ಯಾ ಜೈನ್, ರಮ್ಯಾ, ಸಂಜನಾ ನಾರಾಯಣ್, ಮೇಘಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net