

ಶಿವಮೊಗ್ಗ: ವಿಭಿನ್ನ ಕಥೆ ಹೊಂದಿರುವ ಕನ್ನಡದ ಮೊದಲ ಪ್ಯಾರಲಲ್ ಲೈಫ್ ಆಧಾರಿತ ಹೆಜ್ಜಾರು ಸಿನಿಮಾ ಜು.19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹರ್ಷಪ್ರಿಯ ಹೇಳಿದರು.
ಸಿನಿಮಾ ಕ್ಷೇತ್ರದ ಹಿರಿಯರು ಹಾಗೂ ಹೊಸಬರು ಸೇರಿ ಹೆಜ್ಜಾರು ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಈಗಾಗಲೇ ಚಿತ್ರದ ಟೀಸರ್ ಅತ್ಯಂತ ಯಶಸ್ವಿಯಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಚಿತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಗನ ಎಂಟರ್ಪ್ರೈಸಸ್‌ನಡಿ ಎನ್.ವಿಮಲಾ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿದೆ. ಇಡೀ ಸಿನಿಮಾ ಮಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಮೂರು ಹಾಡುಗಳಿದ್ದು, ನಾನೇ ಸಾಹಿತ್ಯ ಬರೆದಿದ್ದೇನೆ. ಈಗಾಗಲೇ ಪುಟ್ಟಗೌರಿ, ಜೊತೆಜೊತೆಯಲಿ, ಮಹಾನಾಯಕ ಅಂಬೇಡ್ಕರ್ ಧಾರಾವಾಹಿಗೆ ಸಾಹಿತ್ಯ ಬರೆದ ಅನುಭವ ನನಗಿದೆ ಎಂದರು.
ನಾಯಕನಾಗಿ ಭಗತ್ ಆಳ್ವಾ, ನಾಯಕಿಯಾಗಿ ಶ್ವೇತಾ ಡಿಸೋಜ ಅಭಿನಯಿಸಿದ್ದಾರೆ. ನವೀನ್‌ಕೃಷ್ಣ, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಬಾಲರಾಜ್, ಮುನಿರಾಜ್, ವಿನೋದ್, ಭಾರತಿ ಸೇರಿ ರಂಗಭೂಮಿ ಕಲಾವಿದರು ಸಿನಿಮಾದಲ್ಲಿದ್ದಾರೆ ಎಂದರು. ನಾಯಕಿ ಶ್ವೇತಾ ಡಿಸೋಜ ಸುದ್ದಿಗೋಷ್ಠಿಯಲ್ಲಿದ್ದರು.