

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾವುದೇ ಅಡೆ-ತಡೆ, ಸಮಸ್ಯೆ ಇದ್ದರೂ ಅವುಗಳನ್ನೆಲ್ಲ ಕೂಡಲೇ ಬಗೆಹರಿಸಿಕೊಂಡು ಕಾಪು ವಿಧಾನಸಭಾ ಕ್ಷೇತ್ರದಲ್ಲಿರುವ ಹೆಜಮಾಡಿ ಬಂದರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.
ಉಡುಪಿ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಹೆಜಮಾಡಿ ಬಂದರು ಕಾಮಗಾರಿ ಹಾಗೂ ಭೂ ಸ್ವಾಧಿನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಂಬಂಧಪಟ್ಟ ಕಂದಾಯ ಹಾಗೂ ಬಂದರು ಇಲಾಖಾ ಅಧಿಕಾರಿಗಳು ಭೂ ಸ್ವಾಧಿನ ಪ್ರಕ್ರಿಯೆಗೆ ಸಂಬಂಧಿಸಿದ ಕಡತ, ಆರ್ಥಿಕ ಇಲಾಖೆಯಲ್ಲಿ ಮಂಜೂರಾತಿ ಮಾಡಿಸುವ ಕುರಿತು ಹಾಗೂ ಹೆಜಮಾಡಿ ಬಂದರಿನಲ್ಲಿ ಅನುಷ್ಠಾನಕ್ಕೆ ಬಾಕಿ ಇರುವ ಕಾಮಗಾರಿಗಳ ಬಗ್ಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಕೂಡಲೇ ಕಾಮಗಾರಿ ಪೂರ್ಣಗೊಳಿಸಲೇಬೇಕು. ಕಾಮಗಾರಿಗೆ ತೊಡಕಾಗಿರುವ ಮರಗಳನ್ನು ಶೀಘ್ರವೇ ತೆರವುಗೊಳಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅರಣ್ಯ ಇಲಾಖೆಯ ಎಸಿಎಫ್ ಮಾತನಾಡಿ, ಅಡ್ಡಿಯಾಗಿರುವ ಮರಗಳನ್ನು ಮುಂದಿನ 10 ದಿನದೊಳಗೆ ತೆರವು ಮಾಡಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಮೀನುಗಾರಿಕಾ ಇಲಾಖೆಯ ಜೆಡಿ ಮಾತನಾಡಿ, ಸುಮಾರು 42 ಕೋಟಿ ರೂಪಾಯಿಯನ್ನು ಖಾಸಗಿ ಭೂಮಿ ಪರಿಹಾರಕ್ಕಾಗಿ ಬಿಡುಗಡೆ ಮಾಡಬೇಕಿದೆ. ಈಗಾಗಲೇ 21 ಕೋಟಿ ರೂ. ಇಲಾಖೆಯಲ್ಲಿದ್ದು, ಹಣಕಾಸು ಇಲಾಖೆಯ ಅನುಮೋದನೆ ಪಡೆದು ಪಾವತಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್., ಶಾಸಕ ಯಶ್ಪಾಲ್ ಸುವರ್ಣ, ಬಂದರು ಇಲಾಖೆಯ ಶೋಭಾ ಹಾಗೂ ಕಂದಾಯ, ಬಂದರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಮುಖಂಡರು ಉಪಸ್ಥಿತರಿದ್ದರು.
ಕಾಪು ಕ್ಷೇತ್ರದಲ್ಲಿಯೇ ಬಂದರು ಕಾಮಗಾರಿ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗರಂ ಆಗಿದ್ದರು. ಬಂದರು ಅಭಿವೃದ್ಧಿಗೆ ಈಗಾಗಲೇ 188 ಕೋಟಿ ರೂ. ಅನುದಾನ ಮಂಜೂರಾಗಿದೆ. ಶೇ.60 ಕಾಮಗಾರಿಯೂ ಮುಗಿದಿದೆ. ಆದರೂ ಕುಂಟು ನೆಪ ಹೇಳುತ್ತ ಕಾಮಗಾರಿ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾರಣ, ಸಮಸ್ಯೆ ಹೇಳುತ್ತ ಕಾಮಗಾರಿ ವಿಳಂಬ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.