ಹೆಜಮಾಡಿ ಬಂದರಿಗೆ ಅನುದಾನ

port
Published on

ಗಂಗೊಳ್ಳಿ/ಪಡುಬಿದ್ರಿ: ಉಡುಪಿ ಜಿಲ್ಲೆಯ ಹೆಜಮಾಡಿ ಮೀನುಗಾರಿಕಾ ಬಂದರು ಹಾಗೂ ಗಂಗೊಳ್ಳಿ ಜೆಟ್ಟಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಜಮಾಡಿ ಬಂದರು ಕಾಮಗಾರಿಗೆ 180.84 ಕೋಟಿ ರೂ. ಹಾಗೂ ಗಂಗೊಳ್ಳಿ ಬಂದರಿನ ಜೆಟ್ಟಿ ಮರು ನಿರ್ಮಾಣಕ್ಕೆ 12 ಕೋಟಿ ರೂ.ಮಂಜೂರಾಗಲಿದೆ. ಗಂಗೊಳ್ಳಿ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಒಂದೂವರೆ ವರ್ಷವಾಗುತ್ತಿದ್ದು, ಕಿರು ಬಂದರು ಹೂಳು ತುಂಬಿರುವುದರಿಂದ ನಿಷ್ಪ್ರಯೋಜಕವಾಗಿದೆ. 10 ವರ್ಷ ಹಿಂದೆ ಸುಮಾರು 8.2 ಕೋಟಿ ರೂ. ವೆಚ್ಚದಲ್ಲಿ 405 ಮೀ. ಉದ್ದದ ಜೆಟ್ಟಿ, ಹರಾಜು ಪ್ರಾಂಗಣ ಸಹಿತ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೆ ಸುಮಾರು 400 ಮೀಟರ್ ಉದ್ದದ ಜೆಟ್ಟಿಯಲ್ಲಿ ಈಗ ಮೀನುಗಾರಿಕಾ ಚಟುವಟಿಕೆಗೆ ಬಳಕೆಗೆ ಸಿಗುತ್ತಿರುವುದು ಕೇವಲ 150 ಮೀ. ಮಾತ್ರ. ಜೆಟ್ಟಿ ಕುಸಿದು ಬಿದ್ದಿರುವುದರಿಂದ ಎರಡನೇ ಹರಾಜು ಪ್ರಾಂಗಣ ಅಪಾಯಕಾರಿ ಸ್ಥಿತಿಯಲ್ಲಿದೆ. ಇದೀಗ 12 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕಾಮಗಾರಿ ನಡೆಯಲಿದೆ.

30 ವರ್ಷದ ಕನಸು ನನಸು: ಬಹುನಿರೀಕ್ಷಿತ ಹೆಜಮಾಡಿ ಬಂದರು ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯೋಜನೆಗೆ ಮೀನುಗಾರರ 3 ದಶಕಗಳ ಬೇಡಿಕೆ ಈಡೇರಿದಂತಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿ-ಮೂಲ್ಕಿ ಸಂಗಮ ಸ್ಥಳ ಶಾಂಭವಿ ಅಳಿವೆಯ ಉತ್ತರ ಭಾಗದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸಮಾನ ಅನುದಾನದಡಿ ಬಂದರು ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರ 63 ಎಕರೆ ಜಾಗವನ್ನು ಬಂದರು ಯೋಜನೆಗಾಗಿ ಗುರುತಿಸಿದೆ. 10 ಎಕರೆ ಜಮೀನನ್ನು ಬಂದರು ಇಲಾಖೆಗೆ ಹಸ್ತಾಂತರಿಸಿ ಜಿಲ್ಲಾಧಿಕಾರಿ ಹಿಂದೆಯೇ ಆದೇಶಿಸಿದ್ದರು. ಜನವರಿ ಕೊನೆಗೆ ಉಳಿದಿರುವ 35.83 ಎಕ್ರೆ ಜಮೀನನ್ನು ಬಂದರು ನಿರ್ಮಾಣದ ಉದ್ದೇಶಕ್ಕಾಗಿ ಮೀನುಗಾರಿಕೆ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿತ್ತು. ಬಾಕಿ ಅಗತ್ಯವಿರುವ ಖಾಸಗಿಯವರ ಹೆಸರಲ್ಲಿರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮೊತ್ತ ಕಾಯ್ದಿರಿಸಿ ಇದೀಗ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಬಂದರಿನಲ್ಲಿ ವಾರ್ಷಿಕ 26, 224 ಮೆಟ್ರಿಕ್ ಟನ್ ಮೀನು ನಿರ್ವಹಣೆ, 156 ಯಾಂತ್ರೀಕೃತ, 467 ಮೋಟಾರಿಕೃತ ನಾಡದೋಣಿ ಹಾಗೂ 500 ಸಾಂಪ್ರದಾಯಿಕ ಬೋಟ್‌ಗಳು ಸೇರಿ 1,123 ದೋಣಿಗಳಿಗೆ ವ್ಯವಹರಿಸಲು ಅವಕಾಶವಿದೆ.

ಎರಡು ವರ್ಷಗಳ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಜೆಟ್ಟಿ ದುರಸ್ತಿಗೆ ಮನವಿ ಮಾಡಲಾಗಿತ್ತು. ಜೆಟ್ಟಿ ದುರಸ್ತಿಗೆ 9 ಕೋಟಿ ರೂ. ಖರ್ಚು ಮಾಡುವ ಬದಲು ಜೆಟ್ಟಿ ಪುನರ್ ನಿರ್ಮಾಣ ಸೂಕ್ತ ಎಂಬ ಅಭಿಪ್ರಾಯದಿಂದ ಜೆಟ್ಟಿ ನಿರ್ಮಾಣಕ್ಕೆ 12 ಕೋಟಿ ರೂ.ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ವಿಶೇಷ ಕಾಳಜಿಯಿಂದ ಗಂಗೊಳ್ಳಿ ಬಂದರಿನ ಜೆಟ್ಟಿ ಪುನರ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ.

-ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ.

ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದೀಗ ಈಡೇರಿಸಿರುವುದು ಸಂತಸ ತಂದಿದೆ. ಶೀಘ್ರ ಶಿಲಾನ್ಯಾಸ ನಡೆದು ಕಾಮಗಾರಿ ಆರಂಭವಾಗಲಿ.

-ವಿಜಯ ಬಂಗೇರ, ಬಂದರು ಹೋರಾಟಗಾರ

ಮೀನುಗಾರರ ಬಗ್ಗೆ ಕಳಕಳಿ ತೋರಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ. ಈ ಯೋಜನೆ ಮೂಲಕ ಕರಾವಳಿಯ ಮೀನುಗಾರಿಕೆಯ ಅಭಿವೃದ್ಧಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಿದೆ.

-ಯಶ್‌ಪಾಲ್ ಸುವರ್ಣ, ಅಧ್ಯಕ್ಷ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net