ಬೂಕನಬೆಟ್ಟದಲ್ಲಿ ರಾಸುಗಳ ಜಾತ್ರೆ ಶುರು

Oplus_0
Oplus_0
Published on

ಹಿರೀಸಾವೆ: ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ 94ನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರ ಆರಂಭವಾಯಿತು.

ಎರಡು ದಿನಗಳಲ್ಲಿ 4 ಸಾವಿರ ಜಾನುವಾರುಗಳು(ಎತ್ತುಗಳು) ಜಾತ್ರೆಗೆ ಬಂದಿದ್ದು ಹಳ್ಳಿಕಾರ್ ತಳಿ ಎತ್ತುಗಳೇ ಹೆಚ್ಚಾಗಿವೆ. ಜಾತ್ರೆಗೆ ಅತಿ ಹೆಚ್ಚಿನ ಬೆಲೆಯ ಎತ್ತುಗಳು ಬಂದಿವೆ. ಹಳ್ಳಿಕಾರ್ ತಳಿಯ ಎತ್ತುಗಳಿಗೆ ಹೆಚ್ಚು ಬೇಡಿಕೆ ಇದೆ. ಪ್ರತಿ ವರ್ಷದಂತೆ ಈ ಬಾರಿಯೂ ದುಬಾರಿ ಬೆಲೆಯ ರಾಸುಗಳು ಪ್ರಮುಖ ಆಕರ್ಷಣೆಯಾಗಿವೆ. ಮುಂದಿನ 2-3 ದಿನಗಳು ವ್ಯಾಪಾರ ನಡೆಯುತ್ತವೆ. ಭಾನುವಾರದವರೆಗೆ ರಾಸುಗಳು ಇರಲಿವೆ. 6 ಲಕ್ಷ ರೂ.ನಿಂದ 8 ಲಕ್ಷ ರೂ. ಮೌಲ್ಯದ ಎತ್ತುಗಳು ಜಾತ್ರೆಗೆ ಬರುವ ನಿರೀಕ್ಷೆ ಇದೆ. ರೈತರು ಬುಧವಾರ ಎತ್ತುಗಳನ್ನು ವಿಶೇಷ ವಾದ್ಯಗಳು ಹಾಗೂ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿದರು.

ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳ ವಿವಿಧ ತಾಲೂಕುಗಳಿಂದ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾತ್ರೆಗೆ ಕರೆತಂದಿದ್ದಾರೆ. ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ರೈತರು ಮತ್ತು ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆಗಳ ರೈತರು ರಾಸುಗಳನ್ನು ಕೊಳ್ಳಲು ಬಂದಿದ್ದಾರೆ ಎಂದು ತಾಲೂಕಿನ ಮಟ್ಟನವಿಲೆ ಗ್ರಾಮದ ರೈತ ಮಂಜಣ್ಣ ತಿಳಿಸಿದರು.

ಎರಡು ಅಮೃತ ಮಹಲ್ ತಳಿ ಹೋರಿಗಳು ಮಾರಾಟಕ್ಕೆ ಬಂದಿರುವುದು ಮತ್ತೊಂದು ವಿಶೇಷವಾಗಿದೆ. ಇವುಗಳನ್ನು ತಳಿ ಅಭಿವೃದ್ಧಿಗೆ ಸಾಕಲಾಗಿದೆ. ಪ್ರತಿ ತಿಂಗಳು 50 ಸಾವಿರ ರೂ. ಖರ್ಚು ಬರುತ್ತದೆ. ಕೃಷಿ ಕೆಲಸವನ್ನು ಮಾಡುತ್ತೇವೆ ಎಂದು ಹೋರಿಗಳ ಮಾಲೀಕ ತುಮಕೂರು ಜಿಲ್ಲೆ ನೊಣವಿನಕೆರೆ ಹೋಬಳಿಯ ಅಣಪನಹಳ್ಳಿಯ ರೈತ ಹರೀಶ್ ಹೇಳಿದರು.

ಜಾತ್ರೆಯ ಪ್ರಯುಕ್ತ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದೆ. 10 ರಂದು ರಾತ್ರಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕವನ್ನು ಸ್ಥಳೀಯ ಕಲಾವಿದರು ಪ್ರದರ್ಶಿಸಲಿದ್ದಾರೆ. ಜ.18 ರಂದು ಹಿರೀಸಾವೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ರಂಗೋಲಿ, ಮ್ಯಾರಥಾನ್, ಮ್ಯೂಸಿಕಲ್ ಚೇರ್ ಸ್ಪರ್ಧೆ ಮತ್ತು ಪುರುಷರಿಗೆ ಮ್ಯಾರಥಾನ್, ಹಗ್ಗ-ಜಗ್ಗಾಟ, ಸ್ಲೋ ಸೈಕಲ್ ರೇಸ್ ಏರ್ಪಡಿಸಲಾಗಿದೆ ಎಂದು ಉಪ ತಹಸೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ.

ಜ.19ರಂದು ಮಧ್ಯಾಹ್ನ 12 ಗಂಟೆಗೆ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ. ದೊಡ್ಡರಿ ಗ್ರಾಮದ ಮಹಿಳೆಯರು ಮತ್ತು ಕುಂಭೇನಹಳ್ಳಿ ಕೆ.ಕಪನೀಗೌಡರ ತಂಡದಿಂದ ಕೋಲಾಟ ಪ್ರದರ್ಶನ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net