ಆ. 15ಕ್ಕೆ ಮದ್ರಾಸ್​ ಐಐಟಿ ಆನ್​ಲೈನ್​ ವ್ಯಾಸಂಗ ಕೋರ್ಸ್​ ಆರಂಭ

udp--course
Published on

ಉಡುಪಿ: ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ ನೇತೃತ್ವದಲ್ಲಿ ಮದ್ರಾಸ್​ ಐಐಟಿ ಪ್ರವರ್ತಕ್​ ಸಮಾಜಸೇವಾ ವಿಭಾಗದ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಬೇತಿ ಹಾಗೂ ಸಮಾಲೋಚನೆ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಆ.15ರಂದು ಉಚ್ಚಿಲ ಮೊಗವೀರ ಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್​ ಅಧ್ಯಕ್ಷ ಡಾ. ಎಚ್​. ಎಸ್​. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮದ್ರಾಸ್​ ಐಐಟಿ ಮುಖ್ಯ ಸಿಇಓ ಡಾ. ಎಂ.ಜೆ. ಶಂಕರ ರಮಣ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆರೆಸ್ಸೆಸ್​ ಮುಖಂಡ ಪಿ.ಎಸ್​. ಪ್ರಕಾಶ್​ ಅಭ್ಯಾಗತರಾಗಿ ಆಗಮಿಸಲಿದ್ದು, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಡಿಪಿಯು ಮಾರುತಿ, ಡಿಡಿಪಿಐ ಕೆ. ಗಣಪತಿ, ಐಐಟಿ ಮದ್ರಾಸ್​ ಮುಖ್ಯ ನಿರ್ವಹಣಾಧಿಕಾರಿ ಜಿ. ವೀರ ರಾಘವನ್​, ಮುಖ್ಯ ಜ್ಞಾನ ಅಧಿಕಾರಿ ಬಾಲಮುರಳಿ ಶಂಕರ್​ ಉಪಸ್ಥಿತರಿರುವರು ಎಂದು ತಿಳಿಸಿದರು.

ಐಐಟಿ ಮದ್ರಾಸ್​ನ ಪ್ರವರ್ತಕ್​ ಸಂಸ್ಥೆಯೊಂದಿಗೆ ತಮ್ಮ ಟ್ರಸ್ಟ್​ ಕೈಜೋಡಿಸಿದ್ದು ಆನ್​ಲೈನ್​ ತರಗತಿಗೆ ಪೂರಕ ವ್ಯವಸ್ಥೆಗಳು ಹಾಗೂ ಶಿಕ್ಷಕರ ಸಂಭಾವನೆಯನ್ನು ಹೆಗ್ಗುಂಜೆ ಟ್ರಸ್ಟ್​ ಭರಿಸಲಿದೆ. ಇಂಗ್ಲಿಷ್​, ಗಣಿತ ಮತ್ತು ವಿಜ್ಞಾನ ವಿಷಯ ಕುರಿತು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನುರಿತ ಸಂಪನ್ಮೂಲವ್ಯಕ್ತಿಗಳು ತರಗತಿ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ಉಡುಪಿ ಜಿಲ್ಲೆಯ 20 ಶಾಲೆಗಳಲ್ಲಿ ತರಬೇತಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಕರಾವಳಿಯ ಎಲ್ಲಾ 150 ಹೈಸ್ಕೂಲ್​ ಮತ್ತು ಪಪೂ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದರು. ಕಾಪು ಶಾಸಕ ಸುರೇಶ ಶೆಟ್ಟಿ ಗುರ್ಮೆ, ಟ್ರಸ್ಟ್​ ಉಪಾಧ್ಯಕ್ಷ ಎಚ್​. ನಾಗರಾಜ ಶೆಟ್ಟಿ , ವಿಶ್ವಸ್ಥ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net