

ದೇವದುರ್ಗ: ಐದು ವರ್ಷದೊಳಗಿನ ಮಗುವಿಗೆ ಏಳು ಮಾರಕ ರೋಗಗಳಿಂದ ಸಂರಕ್ಷಿಸಲು ಇಂಧ್ರ ಧನುಷ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ ಹೇಳಿದರು.
ತಾಲೂಕಿನ ಹೆಗ್ಗಡದಿನ್ನಿ ಅಂಗನವಾಡಿ ಕೇಂದ್ರದಲ್ಲಿ ನಾಗಡದಿನ್ನಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಇಂದ್ರ ಧನುಷ್ ಲಸಿಕೆ ಅಭಿಯಾನದಲ್ಲಿ ಶನಿವಾರ ಮಾತನಾಡಿದರು. ಇಂದ್ರ ಧನುಷ್ ಲಸಿಕೆಯನ್ನು ಗರ್ಭಿಣಿಯರೂ ಸಹ ಹಾಕಿಸಿಕೊಳ್ಳಬೇಕು. ಮೂರು ತಿಂಗಳ ಕಾಲ ಲಸಿಕಾ ಅಭಿಯಾನ ನಡೆಯಲಿದೆ ಎಂದರು.
ಮಹಿಳಾ ಆರೋಗ್ಯ ಸಹಾಯಕಿ ವಾಣಿಶ್ರೀ ಮಾತನಾಡಿ, 0ದಿಂದ 2ವರ್ಷದ ಮಗು ಹಾಗೂ 2ರಿಂದ 5ವರ್ಷದ ಮಗುವಿಗೆ ಎರಡು ಹಂತದಲ್ಲಿ ಇಂದ್ರ ಧನುಷ್ ಲಸಿಕೆ ಹಾಕಲಾಗುತ್ತಿದೆ. ಪಲ್ಸ್ ಪೊಲಿಯೋ ಲಸಿಕೆಯಿಂದ ವಂಚಿತಗೊಂಡ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ವಾಕ್ಸಿನ್ ಹಾಕಲಾಗುತ್ತಿದೆ ಎಂದರು. ಆರೋಗ್ಯ ಸಹಾಯಕಿ ಕಲಾವತಿ, ಅಂಗನವಾಡಿ ಕಾರ್ಯಕರ್ತೆ ಕವಿತಾ, ಸಂಗೀತಾ, ಆಶಾ ಕಾರ್ಯಕರ್ತೆ ಗೌರಮ್ಮ, ಮಲ್ಲಮ್ಮ ಇತರರಿದ್ದರು.