ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹೆಗಡೆ ಪುನರಾಯ್ಕೆ

SRS BJP
Published on

ಶಿರಸಿ: ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಕರ್ಕಿಯ ಎನ್. ಎಸ್. ಹೆಗಡೆ ಪುನರಾಯ್ಕೆಯಾಗಿದ್ದಾರೆ. ನಗರದ ದೀನದಯಾಳ ಸಭಾಭವನದಲ್ಲಿ ಪಕ್ಷದ ಜಿಲ್ಲಾ ಚುನಾವಣೆ ಉಸ್ತುವಾರಿ ಆರ್.ಕೆ. ಸಿದ್ದರಾಮಣ್ಣ ಈ ವಿಷಯ ಪ್ರಕಟಿಸಿದರು.

ಬಳಿಕ ಮಾತನಾಡಿದ ಸಿದ್ದರಾಮಣ್ಣ, ಪ್ರತಿ ಮೂರು ವರ್ಷಕ್ಕೆ ಒಮ್ಮೆ ಪಕ್ಷದಿಂದ ಸಂಘಟನಾ ಪರ್ವ ನಡೆಯುತ್ತದೆ. ಜಿಲ್ಲಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೆಲ ತಿಂಗಳುಗಳ ಹಿಂದೆಯೇ ನಡೆಯಬೇಕಿತ್ತಾದರೂ ವಿಧಾನಸಭೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿದೆ. ಮುಂದಿನ ಮೂರು ವರ್ಷ ಎನ್.ಎಸ್. ಹೆಗಡೆ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂಬರುವ ಜಿಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆ ದೃಷ್ಟಿಕೋನದಲ್ಲಿಟ್ಟುಕೊಂಡು ಈಗಿನಿಂದಲೇ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.

ಬಿಜಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಹೇಳಿಕೆ ನೀಡುತ್ತಲೇ ಬಂದಿದ್ದು, ಬಹು ಸಂಖ್ಯಾತರ ಭಾವನೆಗಳನ್ನು ಸದಾ ಧಿಕ್ಕರಿಸಿದೆ. ಮುಂಬರುವ ದಿನಗಳಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಮೂಲೆಗುಂಪು ಮಾಡಲಿದ್ದಾರೆ ಎಂದರು.

ನೂತನ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಪ್ರತಿ ಮಂಡಳದಲ್ಲಿ ತಂಡ ರಚಿಸಿ ಎಲ್ಲ ಒಟ್ಟಾಗಿ ಪಕ್ಷವನ್ನು ಬಲಪಡಿಸಿದ್ದೇವೆ ಎಂದರು.

ಪ್ರಮುಖರಾದ ಆನಂದ ಸಾಲೇರ, ಆರ್. ಡಿ. ಹೆಗಡೆ, ವಿವೇಕಾನಂದ ವೈದ್ಯ, ಎಂ.ಜಿ. ನಾಯ್ಕ, ಗುರುಪ್ರಸಾದ ಹರ್ತೆಬೈಲ್ ಇತರರಿದ್ದರು.

ರಾಜ್ಯ ಚುನಾವಣೆಗೆ ಆನಂದ:

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡದಿಂದ ಸ್ಪರ್ಧಿಯಾಗಿ ಆನಂದ ಸಾಲೇರ ಅವರನ್ನು ಆಯ್ಕೆ ಮಾಡಲಾಗಿದೆ. ಶಿರಸಿ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಲೇರ, ನಗರಸಭಾ ಸದಸ್ಯರೂ ಆಗಿದ್ದಾರೆ.

ಶಾಸಕ ಹೆಬ್ಬಾರ ಅವರ ನಡವಳಿಕೆ ಗಮನಕ್ಕಿದೆ. ಅವರ ಕುರಿತು ಮಾಹಿತಿ ರಾಷ್ಟ್ರ ನಾಯಕರಿಗೆ ಕಳಿಸಿದ್ದೇವೆ. ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. -ಆರ್.ಕೆ. ಸಿದ್ದರಾಮಣ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net