

ಹೆಬ್ರಿ: ರಾಜ್ಯದಲ್ಲಿ ಇನ್ಮುಂದೆ ಪ್ರತಿವರ್ಷ 2000 ವೈದ್ಯರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 186 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗುವುದು. ಪಿಎಂ ಕೇರ್ ನಿಧಿಯಿಂದ 50, ರಾಜ್ಯ ಸರ್ಕಾರದಿಂದ 40, ಸಿಎಸ್‌ಆರ್ ವತಿಯಿಂದ 67 ಮತ್ತು ವಿವಿಧ ಸಂಸ್ಥೆಗಳ ಸಹಕಾರದಿಂದ ಉಳಿದ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.
ಪಿಎಚ್‌ಸಿ ಮೇಲ್ದರ್ಜೆಗೆ: ಕಾರ್ಕಳ ತಾಲೂಕಿನ ಅಜೆಕಾರು ಮತ್ತು ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಶೀಘ್ರದಲ್ಲೆ ಮೇಲ್ದರ್ಜೆಗೇರಿಸಲಾಗುವುದು ಎಂದು ಡಾ.ಸುಧಾಕರ್ ತಿಳಿಸಿದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ಹೆಬ್ರಿ ತಾಲೂಕು ಅಲ್ಪಾವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಈ ಸಾಧನೆಗೆ ಕಾರಣವಾದ ಎಂಸಿಎಫ್ ಮತ್ತು ಹೆಬ್ರಿಯ ದಾನಿಗಳ ಸೇವೆ ಶ್ಲಾಘನೀಯ ಎಂದರು.
ಎಂಸಿಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರಾವ್, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಹಸೀಲ್ದಾರ್ ಪುರಂದರ ಕೆ., ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ತಾಲೂಕು ಅರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ವೈದ್ಯಾಧಿಕಾರಿ ಡಾ.ಸಂತೋಷ್‌ಕುಮಾರ್, ಜಿಪಂ ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ತಾಪಂ ನಿಕಟಪೂರ್ವ ಅಧ್ಯಕ್ಷ ರಮೇಶ್ ಪೂಜಾರಿ, ವಿವಿಧ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಎಂಸಿಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರಾವ್, ದಾನಿಗಳ ಪರವಾಗಿ ಮುನಿಯಾಲು ದಿನೇಶ್ ಪೈ, ವರಂಗ ಕೆಲ್ಟೆಕ್ ಮತ್ತು ಕ್ಯಾಂಪ್ಕೋ ಸಂಸ್ಥೆಯನ್ನು ಗೌರವಿಸಲಾಯಿತು. ಅತಿಥಿಗಳಿಗೆ ಸ್ಮರಣಿಕೆ ರೂಪದಲ್ಲಿ ಕಾರ್ಲ ಕಜೆ ಅಕ್ಕಿ ನೀಡಲಾಯಿತು.
ಜಿಲ್ಲೆಯ ಜನ ಮಾದರಿ
ರಾಜ್ಯದಲ್ಲಿ 2.60 ಕೋಟಿ ಲಸಿಕೆ ವಿತರಿಸಲಾಗಿದ್ದು, ಲಸಿಕೆ ವಿತರಣೆಯಲ್ಲಿ ಉಡುಪಿ ಜಿಲ್ಲೆ ಜನಸಂಖ್ಯೆ ಆಧಾರದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು. ಶೇ.45ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಎರಡೂ ಡೋಸ್ ಪಡೆದು ಉಡುಪಿ ಜಿಲ್ಲೆಯ ಜನ ಮಾದರಿಯಾಗಬೇಕು. ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರ ಶ್ರಮ ಮತ್ತು ನಿಸ್ವಾರ್ಥ ಸೇವೆ ಜನರಿಗೆ ಸರ್ಕಾರಿ ವ್ಯವಸ್ಥೆಗಳ ಮೇಲೆ ನಂಬಿಕೆ ಮೂಡಲು ಕಾರಣವಾಗಿದೆ ಎಂದರು.
ತಾಲೂಕು ಆಸ್ಪತ್ರೆಗೆ ಆದ್ಯತೆ
ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಮಕ್ಕಳ ಹಿತದೃಷ್ಟಿಯಲ್ಲಿ ವಾತ್ಸಲ್ಯ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ರಾಜ್ಯದಲ್ಲಿ 45 ಹೊಸ ತಾಲೂಕು ರಚನೆಯಾಗಿದ್ದು, ಎಲ್ಲ ತಾಲೂಕುಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆಯಿದೆ. ತಾಲೂಕು ಆಸ್ಪತ್ರೆ ರಚನೆಯಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಹೆಬ್ರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
----------------------